ತುಮಕೂರು: 'ಗುರು ಬ್ರಹ್ಮ, ಗುರು ವಿಷ್ಣು ಗುರುದೇವೋ ಮಹೇಶ್ವರ, ಗುರು ಸಾಕ್ಷತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ' ಎಂದು ಗುರುಗಳನ್ನು ನಾವು ನಮಿಸುತ್ತೇವೆ. ಆದರೆ ತುಮಕೂರು ಜಿಲ್ಲೆಯಲ್ಲಿ ಶಿಕ್ಷಕನೊಬ್ಬ ಮದ್ಯಪಾನ ಮಾಡಿ ಶಾಲೆಗೆ ಬಂದು ಅಲ್ಲಿಯೇ ಮಲಗಿ ರಾದ್ಧಾಂತ ಮಾಡಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ನಡೆದಿದೆ.
ಪಾವಗಡ ತಾಲೂಕಿನ ಕೊಮಾರ್ಲಹಳ್ಳಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ 1ರಿಂದ 4ನೇ ತರಗತಿಯವರೆಗೆ ಇರುವ ಪ್ರಾಥಮಿಕ ಶಾಲೆಯಲ್ಲಿ 16 ಜನ ವಿದ್ಯಾರ್ಥಿಗಳಿದ್ದಾರೆ. ಈ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿರುವ ನಾಗೇಂದ್ರಪ್ಪ ಮದ್ಯಪಾಮ ಮಾಡಿ ಶಾಲೆಗೆ ಬಂದು ರಾದ್ಧಾಂತ ಮಾಡುತ್ತಿದ್ದಾರೆ ಎಂದು ಇಲ್ಲಿನ ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಈ ರೀತಿ ಮದ್ಯಪಾನ ಮಾಡಿ ಶಾಲೆಗೆ ಬರುತ್ತಿದ್ದಾರೆ. ಅಲ್ಲದೆ ಶಾಲೆಯ ಇನ್ನುಳಿದ ಸಿಬ್ಬಂದಿಗೂ ತೊಂದರೆ ಕೊಡುತ್ತಾರೆ. ಈ ಬಗ್ಗೆ ಗ್ರಾಮಸ್ಥರು ಶಿಕ್ಷಕ ನಾಗೇಂದ್ರಪ್ಪನಿಗೆ ಹಲವು ಬಾರಿ ಬುದ್ಧಿವಾದ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ ಅನ್ನೋದು ಇಲ್ಲಿನವರ ದೂರು. ವಿದ್ಯಾರ್ಥಿಗಳಿಗೆ ಪಾಠ ಮಾಡದೇ ಹೀಗೆ ಮುಂದುವರೆದರೆ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೂಡಲೇ ಇವರನ್ನು ವರ್ಗಾವಣೆ ಮಾಡಬೇಕು. ಬೇರೆ ಶಿಕ್ಷಕರನ್ನು ಶಾಲೆಗೆ ನಿಯೋಜನೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಗ್ರಾಮಸ್ಥರು ದೂರು ನೀಡಿದ್ದಾರೆ.