ತುಮಕೂರು: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಈ ಸಂಬಂಧ ನಿರಾಸೆಯಾಗಿದ್ದು, ಅದರ ಕಾರಣ ಕೂಡ ನಾವು ಹುಡುಕಬೇಕಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದಲ್ಲಿ ಸಾಮಾನ್ಯ ಜನರ ಬದುಕಿಗೆ ತೊಂದರೆ ಆಗುತ್ತಿದೆ ಎಂಬ ವಾತಾವರಣ ಇದೆ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯಿದೆ. ಇಂಥ ಸಂದರ್ಭದಲ್ಲೂ ಜನರು ಬಿಜೆಪಿಗೆ ಮತ ಹಾಕುತ್ತಾರೆ ಅಂದ್ರೆ ಏನೋ ಕಾರಣ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಚುನಾವಣೆ ಮಾಡುವ ರೀತಿಯೇ ಸರಿ ಇಲ್ಲವೋ ಏನೋ ಗೊತ್ತಾಗುತ್ತಿಲ್ಲ. ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದಲ್ಲಿ ಬಿಜೆಪಿ, ಎಸ್‌ಪಿಗಿಂತ ಹೆಚ್ಚು ಚುನಾವಣಾ ಸಭೆಗಳನ್ನು ಮಾಡಿದ್ದರು. ಆದರೂ ಮತ ಬೇರೆಯವರಿಗೆ ಹೋಗಿದೆ. ಇದನ್ನು ನಾವು ಆಂತರಿಕವಾಗಿ ವಿಶ್ಲೇಷಣೆ ಮಾಡಬೇಕು. 2024ರ ಲೋಕಸಭಾ ಚುನಾವಣೆ ಟರ್ನಿಂಗ್ ಪಾಯಿಂಟ್. ಈ ದೇಶದ ಅಭಿವೃದ್ಧಿ, ಬೆಳವಣಿಗೆ ಕಾರಣದಿಂದ 2024ರ ಚುನಾವಣೆ ಬಹಳ ಮುಖ್ಯ. ಅಷ್ಟರೊಳಗೆ ನಾವು ನಮ್ಮ ಮನೆಯನ್ನು ಸರಿಪಡಿಸಿಕೊಳ್ಳಬೇಕು. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಸ್ಥಳೀಯವಾಗಿ ಲೀಡರ್ ಶಿಪ್ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ: ಓರ್ವ ಮಹಿಳೆ ಬಂಧನ, ಇಬ್ಬರು ವಿದೇಶಿಯರ ರಕ್ಷಣೆ
ಇವಿಎಂ ಬಗ್ಗೆ ನನಗೆ ಅನುಮಾನ ಈಗಲೂ ಇದೆ. ಇವಿಎಂ ಅನ್ನು ಮ್ಯಾನುಪ್ಲೆಟ್ ಮಾಡುವ ಟೆಕ್ನಾಲಜಿಯನ್ನು ಅವರು ಇಟ್ಟುಕೊಂಡಿದ್ದಾರೆ. ಬೇರೆ ಬೇರೆ ದೇಶದಿಂದ ಅದನ್ನು ಆಪರೇಟ್ ಮಾಡುತ್ತಾರೆ ಎಂದು ಕೇಳಿದ್ದೇವೆ. ನನಗೂ ಕೂಡ ಅನೇಕ ಬಾರಿ ಆ ರೀತಿ ಅನಿಸಿದೆ. ತಂತ್ರಜ್ಞರು ಹೇಳಿಕೆ ನೋಡಿದರೆ ಇವಿಎಂ ಹ್ಯಾಕ್ ಆಗಿರಬಹುದು ಅನಿಸುತ್ತದೆ ಎಂದರು.
ನಾವು ಅದನ್ನು ಕೇವಲ ಆರೋಪ ಅಷ್ಟೇ ಮಾಡಬಹುದು, ಸ್ಪಷ್ಟವಾಗಿ ನಮಗೂ ಗೊತ್ತಿಲ್ಲ. ಉತ್ತರ ಪ್ರದೇಶದಲ್ಲೂ ಹ್ಯಾಕ್ ಆಗಿರಬಹುದು. ಉತ್ತರ ಪ್ರದೇಶ 80 ಲೋಕಸಭಾ ಸದಸ್ಯರಿರುವ ರಾಜ್ಯ. ಹಾಗಾಗಿ ಆ ರಾಜ್ಯದಲ್ಲಿ ಆಡಳಿತಕ್ಕೆ ಬಂದರೆ ಸಂಸತ್ ಚುನಾವಣೆ ಸುಲಭವಾಗುತ್ತದೆ ಎನ್ನುತ್ತಾರೆ. ಹಾಗಾಗಿ ಅಲ್ಲಿ ಕೂಡ ಯಾಕೆ ಹ್ಯಾಕ್ ಮಾಡಿರಬಾರದು ಎಂಬ ಪ್ರಶ್ನೆನೂ ಬರುತ್ತದೆ ಎಂದು ಶಂಕಿಸಿದರು.
ಡಿ.ಕೆ.ಶಿವಕುಮಾರ್ಗೆ ಫ್ರೀ ಹ್ಯಾಂಡ್ ಸಿಕ್ತಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಡಿ.ಕೆ.ಶಿವಕುಮಾರ್ ಸ್ವತಂತ್ರವಾಗಿದ್ದಾರೆ, ಅವರಿಗೆ ಯಾವುದೇ ಕಂಟ್ರೋಲ್ ಇಲ್ಲ. ಅವರು ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಪ್ರಮುಖ ನಿರ್ಧಾರವನ್ನು ಎಲ್ಲರ ಜೊತೆ ಚರ್ಚಿಸಿ ತೆಗೆದುಕೊಳ್ಳುತ್ತಾರೆ. ಮೇಕೆದಾಟು ಪಾದಯಾತ್ರೆ ಮಾಡುವಾಗ ಎಲ್ಲರ ಜೊತೆ ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್ ಸಿಎಂ ಅಭ್ಯರ್ಥಿ ವಿಚಾರ ಅಪ್ರಸ್ತುತ. ಎಲ್ಲರೂ ಮೊದಲು ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.