ತುಮಕೂರು: ಪೊಲೀಸ್ ಸಿಬ್ಬಂದಿಯೊಬ್ಬರು ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಗಂಡನ ಕಿರುಕುಳಕ್ಕೆ ಬೇಸತ್ತ ಪತ್ನಿ ನ್ಯಾಯಕ್ಕಾಗಿ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ನಗರದಲ್ಲಿ ನಡೆದಿದೆ.
ಘಟನೆ ವಿವರ: ಸಂತ್ರಸ್ತೆಯ ಹೆಸರು ಸಹನಾ. ಈಕೆಯ ಪತಿ ಸುನೀಲ್ ಕುಮಾರ್, ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅರಸಿಕೆರೆ ಮೂಲದ ಸಹನಾ ಒಂದೂವರೆ ವರ್ಷದ ಹಿಂದೆ ಅವರು ವಿವಾಹವಾಗಿದ್ದರು. ಮದುವೆಯಾದ ಎರಡೇ ತಿಂಗಳಲ್ಲಿ ಸಹನಾಗೆ ಕಾಯಿಲೆಯೊಂದು ಕಾಣಿಸಿಕೊಂಡಿತ್ತು. ಈ ವೇಳೆ, ಅವರ ಮನೆಯವರೇ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಆಪರೇಷನ್ ಕೂಡಾ ಮಾಡಿಸಿದ್ದರು.
ಮದುವೆಯ ಸಂದರ್ಭದಲ್ಲಿ 25 ಗ್ರಾಂ ಚಿನ್ನದ ಸರ, 12 ಗ್ರಾಂ ಉಂಗುರ ಹಾಗೂ 30 ಗ್ರಾಂ ಬಂಗಾರದ ಬಳೆಯನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದರಂತೆ, ಅಷ್ಟೇ ಅಲ್ಲ ಸುಮಾರು 18 ಲಕ್ಷ ರೂಪಾಯಿ ಖರ್ಚು ಮಾಡಿ ಅರಸೀಕೆರೆ ವೀರಶೈವ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಆದರೆ, ಕಳೆದ ಒಂದು ವರ್ಷದಿಂದ ಸುನೀಲ್ ನಿರಂತರವಾಗಿ ಕಿರುಕುಳ ಕೊಡುತ್ತಿದ್ದಾರೆ ಎಂದು ಸಹನಾ ಎಸ್ಪಿಗೆ ನೀಡಿರುವ ದೂರಿನಲ್ಲಿ ಆರೋಪ ಮಾಡಿದ್ದಾರೆ.
ಮನೆ ಕಟ್ಟಬೇಕು, ಕಾರು ತಗೋಬೇಕು, 20 ಲಕ್ಷ ಹಣ ತಗೊಂಡು ಬಾ ಎಂದು ನಿರಂತವಾಗಿ ಕಿರುಕುಳ ನೀಡುತ್ತಿದ್ದಾರೆಂದು ಗೃಹಿಣಿ ತನ್ನ ಪತಿ ವಿರುದ್ಧ ಆರೋಪಿಸಿದ್ದಾರೆ. ಅಲ್ಲದೇ ಲಾಠಿಯಿಂದ ಥಳಿಸಿದ್ದಾಗಿಯೂ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಪತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತುಮಕೂರು ಪೊಲೀಸ್ ವರಿಷ್ಠಾಧಿಕಾರಿಗೆ ಸಹನಾ ದೂರು ನೀಡಿದ್ದು, ಎಸ್.ಪಿ ಆದೇಶದ ಮೇರೆಗೆ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಕುರಿತು ಪೊಲೀಸರು ತನಿಖೆ ಕೈಗೊಳ್ಳಲಿದ್ದಾರೆ.
ಅನುಮಾನದ ಭೂತಕ್ಕೆ ಎರಡು ಜೀವಗಳು ಬಲಿ: ಅನುಮಾನ ಎಂಬ ಭೂತಕ್ಕೆ ಎರಡು ಜೀವಗಳು ಬಲಿಯಾಗಿವೆ. ಮದುವೆಯಾದ ಮೂರ್ನಾಲ್ಕು ತಿಂಗಳಲ್ಲೇ ಪತ್ನಿಯನ್ನು ಬರ್ಬರವಾಗಿ ಕೊಂದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಪತ್ನಿಯನ್ನು ಕೊಂದು ಪೊಲೀಸ್ ಠಾಣೆಗೆ ಶರಣಾಗಲು ತ್ತೆರಳುತ್ತಿದ್ದ ವೇಳೆ ಆತನು ಸಹ ಅನಿರೀಕ್ಷಿತವಾಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಈ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.