ತುಮಕೂರು: ಆ.1 ರಂದು ಮಸೀದಿಗಳಲ್ಲಿಯೇ ನಮಾಜ್ ಮಾಡುವ ಮೂಲಕ ಬಕ್ರೀದ್ ಹಬ್ಬವನ್ನು ಸುರಕ್ಷತೆ ಮತ್ತು ಸರಳವಾಗಿ ಆಚರಿಸುವಂತೆ ಜಿಲ್ಲಾ ವಕ್ಫ್ ಅಧಿಕಾರಿ ಸಾಧಿಖಾ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋವಿಡ್-19 ವೇಗವಾಗಿ ವ್ಯಾಪಿಸುತ್ತಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಮಾಜ್ ವೇಳೆ 50ಕ್ಕಿಂತ ಹೆಚ್ಚು ಜನ ಸೇರದಂತೆ ಗಮನ ಹರಿಸಬೇಕು. ಪರಸ್ಪರ ಹಸ್ತಲಾಘನ ಮಾಡದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮುಖಕ್ಕೆ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ನಿಂದ ಕೈಗಳನ್ನು ಶುಚಿಗೊಳಿಸಿ ನಮಾಜ್ ನಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.
ನಮಾಜ್ ಗೂ ಮೊದಲು ಕಡ್ಡಾಯವಾಗಿ ದೇಹದ ತಾಪಮಾನ ತಪಾಸಣೆ ಮಾಡಿಸಬೇಕು. ಅಪರಿಚಿತರು ಮಸೀದಿಗೆ ಬಂದಲ್ಲಿ ವಿಶೇಷ ಗಮನ ಹರಿಸಬೇಕು. 60 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮನೆಯಲ್ಲಿಯೇ ನಮಾಜ್ ಮಾಡಬೇಕೆಂದು ತಿಳಿಸಿದ್ದಾರೆ. ಅಲ್ಲದೆ, ಮಸೀದಿಗಳಲ್ಲಿ ನಮಾಜ್ ಮಾಡಲು 50ಕ್ಕಿಂತ ಹೆಚ್ಚು ಜನರು ಸೇರಿದರೆ, ಎರಡು ಅಥವಾ ಮೂರು ಬ್ಯಾಚ್ ಗಳಲ್ಲಿ ನಮಾಜ್ ಮಾಡುವ ಮೂಲಕ ಸರಳವಾಗಿ ಬಕ್ರೀದ್ ಹಬ್ಬವನ್ನು ಆಚರಿಸಬೇಕೆಂದು ಸಾಧಿಖಾ ಹೇಳಿದ್ದಾರೆ.