ತುಮಕೂರು : ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಒತ್ತಾಯಿಸಿ ಕಳೆದ 28 ದಿನಗಳಿಂದ ನಡೆಯುತ್ತಿರುವ ಪಾದಯಾತ್ರೆ ತುಮಕೂರು ಗ್ರಾಮಾಂತರ ಭಾಗದ ಕೋರಾಗೆ ಬಂದು ತುಲುಪಿದೆ.
ನಿನ್ನೆ ತುಮಕೂರು ಹೊರವಲಯದ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರವಾಗಿದ್ದ ನಂದಿಗ್ರೌಂಡ್ಸ್ನಲ್ಲಿ ನಡೆಯಬೇಕಿದ್ದ ಸಮಾವೇಶದ ಸ್ಥಳ ಬದಲಾಗಿದೆ. ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ದಿನೇದಿನೆ ಹೆಚ್ಚಾಗುತ್ತಿದೆ. ಸಮಾವೇಶದ ದಿನಾಂಕ ಹಾಗೂ ಸ್ಥಳ ನಿಗದಿಯಾಗುತ್ತಿದ್ದಂತೆ ಇನ್ನಷ್ಟು ತೀವ್ರಸ್ವರೂಪ ಪಡೆದುಕೊಳ್ಳಲು ಶುರುವಾಗುತ್ತಿದೆ.
ಕಳೆದ 29 ದಿನಗಳಿಂದ ಮೀಸಲಾತಿಗಾಗಿ ಒತ್ತಾಯಿಸಿ ಕೈಗೊಂಡಿರುವ ಪಾದಯಾತ್ರೆ ನಿನ್ನೆ ತುಮಕೂರು ಗ್ರಾಮಾಂತರ ಭಾಗದ ಕೋರಾಗೆ ತಲುಪಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಕರ್ನಾಟಕದಲ್ಲಿ ಮೊದಲ ಬಾರಿಗೆ ಪಕ್ಷತೀತವಾಗಿ ಎಲ್ಲಾ ಜನಪ್ರನಿಧಿಗಳು ಒಗ್ಗಟ್ಟಾಗಿ ಪಾದಯಾತ್ರೆಗೆ ಬೆಂಬಲ ಕೊಡುತ್ತಿದ್ದಾರೆ. ಇದೊಂದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ನಿನ್ನೆ ನಡೆದ ಸಭೆಯಲ್ಲಿ ಸ್ಥಳದ ವಿಚಾರವಾಗಿ ಚರ್ಚೆ ನಡೆಸಲಾಗಿದೆ. ಈ ಮೊದಲು ಬೆಂಗಳೂರಿನ ನಂದಿಗ್ರೌಂಡ್ಸ್ನಲ್ಲಿ ಧರಣಿ ಸತ್ಯಾಗ್ರಹ ಮತ್ತು ಬೃಹತ್ ಸಮಾವೇಶ ನಡೆಸಬೇಕೆಂದು ತೀರ್ಮಾಸಲಾಗಿತ್ತು. ಆದರೆ, ನಂದಿಗ್ರೌಂಡ್ಸ್ನಿಂದ ಅರಮನೆ ಮೈದಾನಕ್ಕೆ 18 ಕಿ.ಮೀ ದೂರವಿದ್ದು, ಪಾದಯಾತ್ರೆ ಮಾಡಿ ವಿಧಾನಸೌಧಕ್ಕೆ ಧರಣಿ ಸತ್ಯಾಗ್ರಹಕ್ಕೆ ತೆರಳುವ ವೇಳೆಗೆ ರಾತ್ರಿ 9 ಗಂಟೆಯಾಗುವುದರಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ಅರಮನೆ ಮೈದಾನದಲ್ಲಿ ಆಯೋಜಿಸಲು ಚರ್ಚೆ ನಡೆಯುತ್ತಿದೆ ಎಂದರು.
ಸುಮಾರು 10 ಲಕ್ಷ ಪಂಚಮಸಾಲಿಗಳು ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಬೃಹತ್ ಮಟ್ಟದ ಹೋರಾಟವಾಗಿ ರೂಪಾಂತರವಾಗುತ್ತಿದೆ. ಫೆ.21ರವರೆಗೆ ರಾಜ್ಯ ಸರ್ಕಾರಕ್ಕೆ ಗಡುವು ನೀಡುತ್ತಿದ್ದು, ಅಷ್ಟರಲ್ಲಿ ಮೀಸಲಾತಿ ಘೋಷಣೆ ಮಾಡದಿದ್ದರೆ ವಿಧಾನಸೌದದ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೂರುತ್ತೇವೆ ಎಂದು ಸ್ವಾಮೀಜಿ ತಿಳಿಸಿದ್ದು, ರಾಜ್ಯ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.