ತುಮಕೂರು: ಕ್ವಾರಂಟೈನ್ ಕೇಂದ್ರದಿಂದ ಮನೆಗೆ ಹೊರಟ ಗುಣಮುಖರಾದ ಸೋಂಕಿತರಿಗೆ ಭಕ್ತಿಗೀತೆ ಹೇಳಿಕೊಡುವ ಮೂಲಕ ವಿಭಿನ್ನವಾಗಿ ಬೀಳ್ಕೊಡುಗೆ ನೀಡುತ್ತಿರೋ ವ್ಯವಸ್ಥೆ ಜಿಲ್ಲೆಯ ತುರುವೇಕೆರೆ ತಾಲೂಕಿನ ಗುಡ್ಡೇನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ ನಡೆಯುತ್ತಿದೆ.
ಸಂಪೂರ್ಣ ಗುಣಮುಖರಾಗಿ ಕೋವಿಡ್ ಕೇರ್ ಕೇಂದ್ರದಿಂದ ಮನೆಗೆ ಹೊರಡುವವರಿಗೆ ಹಿಂದಿನ ದಿನ ವೈದ್ಯೆ ಡಾ. ಮಾಣಿಕ್ಯ ಅವರು ಭಾವಗೀತೆ ಮತ್ತು ಭಕ್ತಿ ಗೀತೆಯನ್ನು ಹೇಳಿಸಿ ಬದುಕಿನಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.
ತಬಲಾ, ಹಾರ್ಮೋನಿಯಂ ವಾದಕರನ್ನು ಬಳಸಿಕೊಂಡು ಕೇಂದ್ರದ ಹೊರಾಂಗಣ ಆವರಣದಲ್ಲಿ ಸೋಂಕಿತರೆಲ್ಲರನ್ನೂ ಸಾಮಾಜಿಕ ಅಂತರದಲ್ಲಿ ಕೂರಿಸಿ, ‘ನಿನ್ನಾತ್ಮ ನಿಶ್ಚಲವಿರಲು, ಪರಮಾತ್ಮ ನಿಶ್ಚಯವಿರುವ ’ ಎಂಬ ಗೀತೆಯನ್ನು ಹೇಳಿಸಿ ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ದಾರೆ.
ತಮ್ಮ ಬದುಕಿನಲ್ಲಿ ಧೈರ್ಯ ಛಲದಿಂದ ಬದುಕುವ, ಜ್ಞಾನ ಸಂಪಾದನೆ ಮಾಡುವಂತೆ ಪ್ರೇರೇಪಿಸುವ ವೈದ್ಯೆ ಡಾ. ಮಾಣಿಕ್ಯ ಅವರ ಈ ವಿಭಿನ್ನ ಪ್ರಯತ್ನ ಶ್ಲಾಘನೆಗೆ ಪಾತ್ರವಾಗಿದೆ.
ಅಲ್ಲದೆ ಮನೆಗೆ ಹೋಗೋ ಹಿಂದಿನ ದಿನ ಆಟೋಟಗಳನ್ನು ಆಡಿಸುತ್ತಿದ್ದು, ಈ ಮೂಲಕ ಬದುಕಿನಲ್ಲಿ ಲವಲವಿಕೆಯಿಂದ ಇರಬೇಕೆಂಬ ಆಶಯ ಡಾ. ಮಾಣಿಕ್ಯ ಅವರದ್ದಾಗಿದೆ.
ಓದಿ: CD case: ರಮೇಶ್ ಜಾರಕಿಹೊಳಿ ಬಂಧನ, ಬೊಮ್ಮಾಯಿ ರಾಜೀನಾಮೆಗೆ ಸಿದ್ದರಾಮಯ್ಯ ಒತ್ತಾಯ