ತುಮಕೂರು : ರಾಜ್ಯದಲ್ಲಿ ಮೈತ್ರಿ ಸರ್ಕಾರ ಇಲ್ಲದಿದ್ದರೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರು 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಿದ್ದರು ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಕಿಡಿಕಾರಿದ್ದಾರೆ.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಡಿ.ಸಿ.ಗೌರಿಶಂಕರ್, ಕುಮಾರಣ್ಣ ಬೈದರೂ ಪರವಾಗಿಲ್ಲ. ಪಕ್ಷದಿಂದ ಹೊರಗಡೆ ಹಾಕಿದರೂ ಪರವಾಗಿಲ್ಲ. ಆದರೆ ಈ ಮೈತ್ರಿ ಸಹವಾಸ ಬೇಡ ಎಂದು ಅವರಲ್ಲಿ ಕೇಳಿಕೊಳ್ಳುತ್ತೇನೆ ಎಂದರು.
ಇವರು ಆವರನ್ನೂ ಸೋಲಿಸಬೇಕು ಮತ್ತು ಅವರು ಇವರನ್ನು ಸೋಲಿಸಬೇಕು ಇದೇನಾ ಗುರಿ ಎಂದು ಮೈತ್ರಿ ಧರ್ಮದ ಕುರಿತು ಗೌರಿಶಂಕರ್ ಪ್ರಶ್ನಿಸಿದರು.
ಬೆಳಗ್ಗೆ ಎದ್ದರೆ ಯಾರೋ ಶಾಸಕರು ಬಾಂಬೆಗೆ ಹೋದರು. ಸರ್ಕಾರ ಬಿದ್ದು ಹೋಯಿತು. ಇದನ್ನು ಕೇಳಿ ಜನರಿಗೆ ಒಂದು ರೀತಿಯ ಬೇಸರವಾಗಿದೆ. ಚುನಾವಣೆಯಲ್ಲಿ ಇವೆಲ್ಲ ನಕಾರಾತ್ಮಕವಾಗಿ ಪರಿಣಾಮ ಬೀರಿವೆ ಎಂದು ಅಸಮಾಧಾನ ಹೊರಹಾಕಿದರು.