ತುಮಕೂರು:ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಇಂದು ಗೊಲ್ಲ ಸಮುದಾಯದ ಸಭೆಯ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿರುವುದಾಗಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದರು.
ನಗರದ ಹೊರವಲಯದಲ್ಲಿರುವ ಅರಳಿ ಮರದ ಪಾಳ್ಯದಲ್ಲಿ ಆಯೋಜಿಸಲಾಗಿದ್ದ ಗೊಲ್ಲ ಸಮುದಾಯದ ಮುಖಂಡರು ಮತ್ತು ಎರಡು ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಅಣ್ಣ-ತಮ್ಮಂದಿರು ಮತ್ತು ಗೌಡ ಪೂಜಾರರು ಸೇರಿ ಕೆಲಸ ಮಾಡಬೇಕಿದೆ. ನಿಮ್ಮ ದೇವಸ್ಥಾನಗಳಲ್ಲಿ ಕುಳಿತು ಚರ್ಚೆ ಮಾಡಿ ದೇವೇಗೌಡರನ್ನು ಗೆಲ್ಲಿಸುವ ಕಾರ್ಯತಂತ್ರ ರೂಪಿಸಬೇಕು ಎಂದು ಕರೆ ನೀಡಿದರು.
ಗೊಲ್ಲರ ಸಭೆಯಿಂದ ಪ್ರಚಾರ ಸಭೆ ಆರಂಭಿಸಬೇಕು. ಅದೇ ರೀತಿ ಕುರುಬರಿಂದಲೂ ಪ್ರಚಾರ ಸಭೆ ಆರಂಭಿಸಿದರೆ ಒಳ್ಳೆಯದು ಎಂದು ಇದೇ ವೇಳೆ ಹೇಳಿದರು. ಗೊಲ್ಲರು ಮತ್ತು ಕುರುಬರು ಎಂದರೆ ಒಂದೇ ಎಂದು ಅವರು ವಿಶ್ಲೇಷಿಸಿದರು.
ಬಿಜೆಪಿ ಅಭ್ಯರ್ಥಿ ಬಸವರಾಜ್, ಬಿಜೆಪಿ ಮುಖಂಡರಾದ ಮಾಧುಸ್ವಾಮಿ, ಸುರೇಶ್ ಗೌಡ ಅವರುಗಳು ಯಾರು ಏನೇ ಹೇಳಿದರೂ ನನಗೆ ತುಂಬಾ ವಿಶ್ವಾಸ ಇದೆ. ಮಾಜಿ ಪ್ರಧಾನಿ ದೇವೇಗೌಡರು ಈ ಕ್ಷೇತ್ರದಿಂದ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಭೆಯಲ್ಲಿ ಜೆಡಿಎಸ್ ಶಾಸಕ ಮಧುಗಿರಿ ವೀರಭದ್ರಯ್ಯ, ಮಾಜಿ ಶಾಸಕ ಸುಧಾಕರ್ ಲಾಲ್ ಮತ್ತಿತರರು ಹಾಜರಿದ್ದರು.