ತುಮಕೂರು: ಆನ್ಲೈನ್ನಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ತುಮಕೂರು ಪೊಲೀಸರು ಅವರಿಂದ 3,78,156 ರೂ. ವಶಪಡಿಸಿಕೊಂಡಿದ್ದಾರೆ.
ಗುಬ್ಬಿ ಪಟ್ಟಣದ ವಿನಯ್ ಕುಮಾರ್ ಮತ್ತು ಆರ್. ಪ್ರಸಾದ್ ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಆರೋಪಿಗಳು lucky88 ಎಂಬ ಆಪ್ ಅನ್ನು ಬಳಸಿಕೊಂಡು ಸಾರ್ವಜನಿಕರಿಂದ ಆನ್ಲೈನ್ನಲ್ಲಿ ಫೋನ್ ಪೇ ಹಾಗೂ ಗೂಗಲ್ ಪೇ ಖಾತೆ ಸಂಖ್ಯೆ ಮೂಲಕ ಎಸ್ಬಿಐ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು.
ಅಕ್ಟೋಬರ್ 1ರಂದು ಐಪಿಎಲ್ ಟ್ವೆಂಟಿ-20 ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದರು. ಈ ಕುರಿತ ಮಾಹಿತಿ ಪಡೆದ ಪೊಲೀಸರು, ಬೆಟ್ಟಿಂಗ್ಗೆ ಬಳಸುತ್ತಿದ್ದ 3 ಮೊಬೈಲ್ ಫೋನ್ಗಳು, ಒಂದು ಟಿವಿ, 23,580 ರೂ. ಹಾಗೂ ಆರೋಪಿಗಳಿಬ್ಬರ ಬ್ಯಾಂಕ್ ಖಾತೆಯಲ್ಲಿದ್ದ 3,54,576 ರೂ. ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಫೋನ್ ಪೇ ಮತ್ತು ಗೂಗಲ್ ಪೇ ಗಳಿಂದ ಬೆಟ್ಟಿಂಗ್ ಹಣವನ್ನು ತಮ್ಮ ಖಾತೆಗಳಿಗೆ ಆಟಗಾರರಿಂದ ಕಟ್ಟಿಸಿಕೊಳ್ಳುತ್ತಿದ್ದರು. ನಗದು ರೂಪದಲ್ಲಿ ಕಟ್ಟಿಸಿಕೊಂಡು lucky88 ಎಂಬ ಆ್ಯಪ್ಗೆ ಆಟಗಾರರನ್ನು ಸೇರಿಸಿಕೊಂಡು username ಮತ್ತು paasword ನೀಡಿ ಅವರಿಂದ ಕ್ರಿಕೆಟ್ ನಡೆಯುವ ಸಮಯದಲ್ಲಿ ಬೆಟ್ಟಿಂಗ್ ಹಣವನ್ನು ಪಡೆದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆ್ಯಪನ್ನು ಗುಬ್ಬಿ ನಿವಾಸಿ ಸಿದ್ದರಾಜು ಎಂಬ ಆರೋಪಿಯು ಹಣ ಪಡೆದು ಬೆಂಗಳೂರಿನಿಂದ ಸರಬರಾಜು ಮಾಡುತ್ತಿದ್ದನೆಂದು ತಿಳಿದುಬಂದಿದೆ. ಸಿದ್ದರಾಜು ತಲೆಮರೆಸಿಕೊಂಡಿದ್ದು, ಆತನ ಬಲೆಗಾಗಿ ವಿಶೇಷ ತಂಡ ರಚಿಸಲಾಗಿದೆ.
ಸಾರ್ವಜನಿಕರಲ್ಲಿ ಒಂದಕ್ಕೆ ಹತ್ತರಷ್ಟು ಹಣ ಗಳಿಸಬಹುದೆಂಬ ಆಸೆ ಹುಟ್ಟಿಸಿ ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ನಡೆಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ. ಈ ಕುರಿತಂತೆ ಸಾರ್ವಜನಿಕರು ಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಮನವಿ ಮಾಡಿದ್ದಾರೆ.