ತುಮಕೂರು: ತಾಲ್ಲೂಕು ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬಾಣವಾರ ಗೇಟ್ ಬಳಿ ದರೋಡೆ ಮಾಡಲು ಹೊಂಚುಹಾಕಿ ಕುಳಿತಿದ್ದ ಐವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ದರೋಡೆ ಮತ್ತು ಸುಲಿಗೆ ಪ್ರಕರಣಗಳು ಬೆಳಕಿಗೆ ಬಂದಿವೆ.
ನ.23ರಂದು ಆರೋಪಿಗಳಾದ ಜಫ್ರುದ್ದೀನ್, ಸಫಿರುದ್ದೀನ್, ಮೊಕದ್ದರ್ ಪಾಷಾ, ಮಹಮ್ಮದ್ ಸಲೀಂ , ಕಲೀಂ ಪಾಷಾ ಎಂಬುವರು ತುಮಕೂರು-ಕುಣಿಗಲ್ ರಸ್ತೆಯಲ್ಲಿ ವಾಹನಗಳನ್ನು ತಡೆದು ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕಿ ಕುಳಿತಿದ್ದರು. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಹೆಬ್ಬೂರು ಪೊಲೀಸ್ ಠಾಣೆ ಸಿಬ್ಬಂದಿಗಳು ಟಾಟಾ ಸುಮೋ ಸಮೇತ ಐವರನ್ನು ವಶಕ್ಕೆ ಪಡೆದಿದ್ದರು.
ಟಾಟಾ ಸುಮೋದಲ್ಲಿ ಲಾಂಗ್, ಡ್ರ್ಯಾಗನ್ ಸೇರಿದಂತೆ ಮಾರಕಾಸ್ತ್ರಗಳನ್ನು ಇರಿಸಿಕೊಂಡಿದ್ದರು. ಆರೋಪಿಗಳನ್ನು ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದಾಗ ಸುಮಾರು ಇಪ್ಪತ್ತೈದು ದಿನಗಳ ಹಿಂದೆ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ನಲ್ಲಿ ಟಾಟಾ ಸುಮೋ ಮತ್ತು ಮೊಬೈಲ್ಗಳನ್ನು ಸುಲಿಗೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.
ಅಲ್ಲದೆ ಮಾಗಡಿ ಬಳಿ ಇರುವ ಶನಿದೇವರ ದೇವಸ್ಥಾನದಲ್ಲಿ ವಿಗ್ರಹಗಳನ್ನು ಕಳವು ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆರೋಪಗಳಿಂದ ಒಂದು ಟಾಟಾ ಸುಮೋ ವಾಹನಗಳ ಬಿಡಿ ಭಾಗಗಳು, 10 ಮೊಬೈಲ್ ಫೋನ್, ಒಂದು ನಾಡ ಪಿಸ್ತೂಲ್ , 5 ಜೀವಂತ ಗುಂಡುಗಳು, ಲಾಂಗ್, ಏಳು ಡ್ರ್ಯಾಗರ್ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೆ ಶನಿ ದೇವರ ವಿಗ್ರಹ ಸೇರಿದಂತೆ ಮೂರು ಪಂಚಲೋಹದ ವಿಗ್ರಹಗಳನ್ನು ಸುಲಿಗೆಕೋರರಿಂದ ಪೊಲೀಸರು ಜಪ್ತಿ ಮಾಡಿದ್ದಾರೆ.