ತುಮಕೂರು: ಲಾಕ್ ಡೌನ್ ಸಡಿಲಿಕೆ ನಂತರ ವ್ಯಾಪಾರ, ವಹಿವಾಟು ಆರಂಭಿಸಲು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ 4,000 ಬೀದಿ ಬದಿ ವ್ಯಾಪಾರಿಗಳಿಗೆ 3.75 ಕೋಟಿ ರೂ. ಹಣವನ್ನು ಸಾಲದ ರೂಪದಲ್ಲಿ ನೀಡಲಾಗಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೆ ಎನ್ ರಾಜಣ್ಣ ತಿಳಿಸಿದ್ದಾರೆ.
ತುಮಕೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿದ ತಕ್ಷಣ ಅವರ ಖಾತೆಗಳಿಗೆ ವ್ಯಾಪಾರ ಆರಂಭಿಸಲು ಹಣ ವರ್ಗಾಯಿಸಲಾಗಿತ್ತು. ಈ ರೀತಿಯ ದಿಟ್ಟ ನಿರ್ಧಾರ ಕೈಗೊಳ್ಳಲು ಬ್ಯಾಂಕಿನ ಎಲ್ಲಾ ನಿರ್ದೇಶಕರು ಸಹಕಾರ ಕೂಡ ಇತ್ತು ಎಂದು ಇದೇ ವೇಳೆ ತಿಳಿಸಿದರು.
ತುಮಕೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಲ್ಲಾ ನಿರ್ದೇಶಕರು ಜಿಲ್ಲೆಯ ವಿವಿಧ ಪಕ್ಷಗಳ ಮುಖಂಡರಾಗಿದ್ದರು. ಡಿಸಿಸಿ ಬ್ಯಾಂಕ್ ಅಭಿವೃದ್ಧಿಗೆ ಮುಕ್ತ ಮನಸ್ಸಿನಿಂದ ಸರ್ವ ಪ್ರಯತ್ನ ನಡೆಸುತ್ತಿದ್ದಾರೆ ಎಂದರು. ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಡಿಸಿಸಿ ಬ್ಯಾಂಕ್ ಗಳಲ್ಲಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದ ನಿದರ್ಶನಗಳಿಲ್ಲ. ಆದರೆ, ತುಮಕೂರು ಡಿಸಿಸಿ ಬ್ಯಾಂಕ್ ಇಂತಹ ಪ್ರಯತ್ನಕ್ಕೆ ನಾಂದಿ ಹಾಡಿದೆ ಎಂದು ತಿಳಿಸಿದರು.
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಸಂಸದ ಜಿ ಎಸ್ ಬಸವರಾಜು ಹಾಗೂ ಜಿಲ್ಲೆಯ ಎಲ್ಲ ಮಾಜಿ ಸಚಿವರು ಹಾಲಿ ಸಚಿವರು ಪಕ್ಷಾತೀತವಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಅವಿರೋಧ ಆಯ್ಕೆಗೆ ಸಾಥ್ ನೀಡಿದ್ದಾರೆ. ತುಮಕೂರು ಜಿಲ್ಲೆಯ ಪ್ರತಿ ಹೋಬಳಿಯಲ್ಲಿ ಬ್ಯಾಂಕ್ ಶಾಖೆಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದೆ. ಅದೇ ರೀತಿ ಸಾಲ ಪಡೆಯಲು ಅರ್ಹರು ಆದಂತಹ ಎಲ್ಲಾ ರೈತರಿಗೂ ಅಲ್ಪಾವಧಿ ಸಾಲ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.