ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆ ತಡೆಗಟ್ಟಲು ಸಾರ್ವಜನಿಕರು ತೆಗೆದುಕೊಂಡಿರೋ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಲು ಸ್ವತಃ ಜಿಲ್ಲಾಧಿಕಾರಿ ತುಮಕೂರು ನಗರದಲ್ಲಿ ಇಂದು ಗಸ್ತು ತಿರುಗಿದರು.
ನಗರದ ಪ್ರಮುಖ ರಸ್ತೆಗಳಾದ ಎಂಜಿ ರಸ್ತೆ, ಅಶೋಕ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಸಾಗಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ತುಮಕೂರು ಪಾಲಿಕೆ ಆಯುಕ್ತೆ ರೇಣುಕಾದೇವಿ ಕಾಲ್ನಡಿಗೆಯಲ್ಲಿ ಸಾಗಿದರು.
ಇಬ್ಬರು ವಿದ್ಯಾರ್ಥಿನಿಯರು ಮಾಸ್ಕ್ ಇಲ್ಲದೆ ಎಂಜಿ ರಸ್ತೆಯಲ್ಲಿ ಹೋಗುತ್ತಿದ್ದುದನ್ನು ಪ್ರಶ್ನಿಸಿದ ಜಿಲ್ಲಾಧಿಕಾರಿ ಪಾಟೀಲ್, ಮಾಸ್ಕ್ ಧರಿಸುವಂತೆ ಸೂಚಿಸಿದರು. ಅಲ್ಲದೆ ಅವರ ಬಳಿ ಮಾಸ್ಕ್ ಇಲ್ಲದ್ದನ್ನು ಗಮನಿಸಿದ ಅವರು, ತಮ್ಮ ಸಿಬ್ಬಂದಿ ಬಳಿ ಇದ್ದ ಹೊಸ ಮಾಸ್ಕ್ವೊಂದನ್ನು ನೀಡಿದರು.
ಬೇಕರಿ ಹಾಗೂ ಅಂಗಡಿ ಮಳಿಗೆಗಳಲ್ಲಿ ಮಾಲೀಕರು ಮಾಸ್ಕ್ ಹಾಕದೆ ವ್ಯಾಪಾರ ವಹಿವಾಟು ನಡೆಸುತ್ತಿದ್ದುದನ್ನು ಗಮನಿಸಿ, ಖಡಕ್ ಎಚ್ಚರಿಕೆ ನೀಡಿದರು. ಈಗಾಗಲೇ ಸಾರ್ವಜನಿಕರಿಗೆ ಸೂಚಿಸಿರುವಂತೆ ಸೋಂಕು ಹರಡುವುದನ್ನು ತಡೆಗಟ್ಟಲು ಒಳಾಂಗಣ ಕಾರ್ಯಕ್ರಮಗಳಿಗೆ ನೂರು ಜನರಿಗೆ ಸೀಮಿತವಾಗುವಂತೆ ಮತ್ತು ಹೊರಾಂಗಣ ಕಾರ್ಯಕ್ರಮದಲ್ಲಿ 200 ಜನ ಮೀರದಂತೆ ಭಾರೀ ಕ್ರಮಗಳನ್ನು ಆಯೋಜಿಸುವಂತೆ ಸೂಚಿಸಲಾಗಿದೆ. ಅದನ್ನು ಮೀರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.