ತುಮಕೂರು : ಪ್ರಧಾನಿ ಮೋದಿ ಸೇರಿದಂತೆ ರಾಜಕೀಯ ಬದುಕಿನಲ್ಲಿ ಉನ್ನತ ಸ್ಥಾನಕ್ಕೇರಿರುವ ವ್ಯಕ್ತಿಗಳ ಆರಾಧ್ಯ ದೇವಿಯಾಗಿದ್ದಾಳೆ, ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ದಸರೀಘಟ್ಟದ ಶ್ರೀ ಚೌಡೇಶ್ವರಿ ದೇವಿ.
ಹೌದು ಶ್ರೀ ಕ್ಷೇತ್ರ ದಸರಿಘಟ್ಟದ ಶ್ರೀ ಚೌಡೇಶ್ವರಿ ದೇವಿಯ ಪವಾಡ ಕೂಡ ಅದ್ಭುತವಾದದ್ದು. ಕಷ್ಟಗಳನ್ನು ಪರಿಹರಿಸು ಎಂದು ಇಲ್ಲಿಗೆ ಬರುವಂತಹ ಭಕ್ತರಿಗೆ ಅವರ ಭವಿಷ್ಯದಲ್ಲಿನ ಆಗುಹೋಗುಗಳನ್ನು ಬರೆದು ಹೇಳುವಂತಹ ಒಂದು ಸಂಪ್ರದಾಯವನ್ನು ನಡೆಸಿಕೊಂಡು ಬರಲಾಗುತ್ತಿದೆ.
ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ದೇಗುಲದ ಇಬ್ಬರು ಭಕ್ತರು ಹಿಡಿದುಕೊಳ್ಳುತ್ತಾರೆ. ಒಂದು ಮಣೆಯ ಮೇಲೆ ಅಕ್ಕಿ ಅಥವಾ ರಾಗಿ ಹಿಟ್ಟನ್ನು ಹಾಕಿದರೆ ಅದರ ಮೇಲೆ ಯಾವ ಭಾಷೆಯಲ್ಲಾದರೂ ನಮ್ಮ ಮನದಾಳದ ಭಾವನೆ, ನೋವಿನ ಸಮಸ್ಯೆಯನ್ನು ಬರೆದರೆ ಅದಕ್ಕೆ ಪರಿಹಾರ ಹೇಳುತ್ತಾಳೆ ಶ್ರೀ ಚೌಡೇಶ್ವರಿದೇವಿ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ. ಭಕ್ತರು ತಮ್ಮ ಮುಂದಿನ ಭವಿಷ್ಯವನ್ನು ಹೊತ್ತು ತಂದು ಪ್ರಶ್ನೆ ಕೇಳಿ ಉತ್ತರವನ್ನು ಕೇಳಿಕೊಂಡು ಹೋಗುವುದು ಇಲ್ಲಿನ ಒಂದು ಪರಿಪಾಠವಾಗಿದೆ.
ದೇವಿಯ ಬಳಿ ಪ್ರಶ್ನೆ ಕೇಳಲು ರಾಜ್ಯ, ಹೊರ ರಾಜ್ಯಗಳಿಂದಲೂ ಅನೇಕ ಭಕ್ತರು ಇಲ್ಲಿಗೆ ಬರುತ್ತಾರೆ. ಅದಲ್ಲದೆ ಈ ಉತ್ಸವಮೂರ್ತಿಯನ್ನು ಮಹಾರಾಷ್ಟ್ರ ಕೇರಳ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಗೂ ಕೂಡ ಕರೆಸಿಕೊಂಡು ಭಕ್ತರು ಉತ್ತರವನ್ನು ಕೇಳಿ ದೇವಿಯ ದರ್ಶನವನ್ನು ಪಡೆದು ಪುನೀತರಾಗುತ್ತಾರೆ.