ತುಮಕೂರು: ಪ್ರಸ್ತುತ ಕೊರೊನಾ ಸೋಂಕಿನಿಂದ ಪಾರಾಗಲು ಜನರು ರೋಗ ನಿರೋಧಕ ಆಹಾರ ಪದ್ಧತಿಯತ್ತ ಮುಖ ಮಾಡಿದ್ದಾರೆ. ಅದರಲ್ಲೂ ಅನೇಕ ಬಗೆಯ ಕಷಾಯಗಳನ್ನು ಸೇವಿಸಲು ಮುಂದಾಗಿದ್ದಾರೆ.
ಇತ್ತೀಚೆಗೆ ಕೆಲ ಕ್ಯಾಂಟೀನ್ ಹಾಗೂ ಹೋಟೆಲ್ಗಳಲ್ಲಿ ಕಷಾಯಗಳನ್ನು ಮಾರಾಟ ಮಾಡಲಾಗುತ್ತಿದೆ. ತುಮಕೂರಿನಲ್ಲಿನ ಒಂದು ಕ್ಯಾಂಟೀನ್ನಲ್ಲಿ ಗ್ರಾಹಕರಿಗೆ ರೋಗ ನಿರೋಧಕ ಶಕ್ತಿಯ ಕಷಾಯವನ್ನು ಉಚಿತವಾಗಿ ನೀಡಲಾಗುತ್ತಿದೆ. ಹೌದು... ತುಮಕೂರು ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಶಿರಡಿ ಉಪಹಾರ ಹೆಸರಿನ ಕ್ಯಾಂಟಿನ್ನಲ್ಲಿ ರೋಗ ನಿರೋಧಕ ಶಕ್ತಿ ಹೊಂದಿರುವ ಕಷಾಯವನ್ನು ತಿಂಡಿ ತಿಂದ ನಂತರ ಕೊಡಲಾಗುತ್ತಿದೆ.
ಕ್ಯಾಂಟೀನ್ನಲ್ಲಿ ಪ್ರತ್ಯೇಕವಾಗಿ ದೊಡ್ಡದಾದ ಪ್ಲಾಸ್ಕ್ನಲ್ಲಿ ಶುಂಠಿ, ತುಳಸಿ, ಮೆಣಸು ಮಿಶ್ರಿತ ಕಷಾಯವನ್ನು ಇಡಲಾಗುತ್ತಿದೆ. ಬಿಸಿ ನೀರಿನಲ್ಲಿ ಕುದಿಸಿ ಗ್ರಾಹಕರಿಗೆ ನೀಡಲಾಗುತ್ತಿದೆ. ಕೊರೊನಾ ಸೋಂಕಿನ ಭೀತಿಯಿಂದ ನಲುಗಿರುವ ಜನರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲಿ ಎಂಬ ಉದ್ದೇಶವನ್ನು ಹೊಂದಲಾಗಿದೆ. ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ.
ಇದಲ್ಲದೇ ಕ್ಯಾಂಟೀನ್ ಮುಂಭಾಗ ರೋಗ ನಿರೋಧಕ ಶಕ್ತಿ ಹೊಂದಿರುವ ಅಮೃತ ಬಳ್ಳಿಯನ್ನು ಬೆಳೆಸಿ ತೋರಣದ ರೂಪದಲ್ಲಿ ಕಟ್ಟಲಾಗಿದೆ. ಈ ಮೂಲಕ ಕ್ಯಾಂಟೀನ್ಗೆ ಬರುವ ಗ್ರಾಹಕರಲ್ಲಿ ಅಮೃತ ಬಳ್ಳಿಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ ಪ್ರಸ್ತುತ ಕೊರೊನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದೆ.
ತುಮಕೂರು ನಗರದಲ್ಲಿ ಎಲ್ಲಿಯೂ ಕೂಡ ಇಂತಹ ಒಂದು ಪ್ರಯತ್ನ ನಡೆದಿಲ್ಲ. ಹೀಗಾಗಿ ಕ್ಯಾಂಟೀನ್ ಮಾಲೀಕ ನಾಗರಾಜ್ ಅವರ ಜಾಗೃತಿಯ ಪ್ರಯತ್ನ ಸಾಕಷ್ಟು ಪ್ರಶಂಸನೀಯವಾಗಿದೆ ಎನ್ನುತ್ತಾರೆ ಗ್ರಾಹಕರು. ಕ್ಯಾಂಟೀನ್ ಮಾಲೀಕ ನಾಗರಾಜ್ ಅವರಲ್ಲಿರೋ ಜನರ ಆರೋಗ್ಯದ ಮೇಲಿನ ಕುರಿತಾದ ಕಾಳಜಿ ನಿಜಕ್ಕೂ ಮಾದರಿಯಾಗಿದೆ ಎಂದು ಹೇಳಬಹುದಾಗಿದೆ.