ತುಮಕೂರು : ಕೋವಿಡ್ ಬಿಕ್ಕಟ್ಟಿನಿಂದ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನರು ಸರಳವಾಗಿ ದಸರಾ ಆಚರಣೆ ಮಾಡುತ್ತಿದ್ದಾರೆ. ಪ್ರತಿಯೊಬ್ಬರು ತಮ್ಮ ವಾಹನಗಳನ್ನು ಸ್ವಚ್ಛಗೊಳಿಸಿ, ಹೂವಿನಿಂದ ಸಿಂಗಾರಗೊಳಿಸಿ, ಪೂಜೆ ಸಲ್ಲಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಈ ಬಾರಿ ಹೂವಿನ ಬೆಲೆ ಏರಿಕೆಯಾಗಿರುವುದರಿಂದ ಹಬ್ಬ ಕಳೆಗುಂದಿದೆ.
ವಾಹನಗಳಿಗೆ ಸಿಂಗರಿಸುವಂತಹ ಹಾರದ ಬೆಲೆ 350 ರಿಂದ 550 ರೂ. ಸೇವಂತಿಗೆ ಒಂದು ಮಾರು ಕಳೆದ ವರ್ಷ 100 ರೂ. ಆದರೆ, ಈ ಬಾರಿ 250 ರೂ. ಯಿಂದ 300ರೂ, ಚೆಂಡು ಹೂ 100 ರೂ. ಯಿಂದ 150, ಕಾಕಡ 250 ರೂಪಾಯಿ, ಕನಕಾಂಬರಿ 200 ರೂಪಾಯಿಗೆ ಏರಿಕೆಯಾಗಿದೆ. ಹೂವಿನ ವ್ಯಾಪಾರಿ ಲಕ್ಷ್ಮಿಪತಿ ಮಾತನಾಡಿ, ವರ್ಷಕ್ಕಿಂತ ಈ ಬಾರಿ ಹೂವಿನ ಬೆಲೆಯಲ್ಲಿ ಏರಿಕೆ ಕಂಡಿದ್ದು, ಗ್ರಾಹಕರು ಕಡಿಮೆ ಹೂಗಳನ್ನು ಕೊಳ್ಳುತ್ತಿದ್ದಾರೆ. ದಸರಾ ಹಬ್ಬದ ವ್ಯಾಪಾರ ಮೊದಲಿನಂತಿಲ್ಲ ಎಂದರು.
ತರಕಾರಿ ಬೆಲೆಯಲ್ಲಿಯೂ ಏರಿಕೆ ಕಂಡಿದ್ದು, ಹುರುಳಿಕಾಯಿ ಕೆ.ಜಿಗೆ 60 ರೂ, ಆಲೂಗಡ್ಡೆ 50 ರೂ., ಗೆಡ್ಡೆಕೋಸು 40 ರೂ., ಕ್ಯಾರೆಟ್ 60ರಿಂದ 80 ರೂ., ಎಲೆಕೋಸು 40 ರೂಪಾಯಿಯಾಗಿದೆ. ಇನ್ನೂ ಸ್ಥಳೀಯ ಪ್ರದೇಶಗಳಿಂದ ಬರುತ್ತಿದ್ದ ಈರುಳ್ಳಿ ಪ್ರಮಾಣ ಕಡಿಮೆಯಾಗಿದ್ದು, ಅಂತರ್ ಜಿಲ್ಲೆಗಳಿಂದ ತರಿಸಿಕೊಳ್ಳಲಾಗ್ತಿದೆ. ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಇನ್ನೂ, ಬಾಳೆಹಣ್ಣು ಕೆ.ಜಿ. 70 ರೂ, ಆ್ಯಪಲ್ ಕೆ.ಜಿಗೆ 100 ರೂ, ಮೂಸಂಬಿ 50 ರೂ., ಸಪೋಟ ಕೆ.ಜಿಗೆ 70 ರೂ., ದಾಳಿಂಬೆ ಕೆ.ಜಿಗೆ 100 ರೂಪಾಯಿ ಆಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.