ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ವೇಳೆ ಶಾಲಾ ಮಕ್ಕಳಿಗೆ ನಕಲಿ ವಿಮೆ ಪಾಲಿಸಿ ನೀಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೆಡಿಎಸ್ ಶಾಸಕ ಗೌರಿಶಂಕರ್ ಅವರಿಗೆ ಖುದ್ದು ಹಾಜರಾಗುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಅಲ್ಲದೇ ನ್ಯಾಯಾಲಯಕ್ಕೆ ಅಕ್ಟೋಬರ್ 22ರಂದು ಹಾಜರಾಗುವಂತೆ ಸೂಚನೆ ನೀಡಿದೆ.
ಮಾಜಿ ಶಾಸಕ ಸುರೇಶಗೌಡ ಅವರ ಸಹೋದರ ರಮೇಶ್ ಎಂಬುವರು ಈ ಕುರಿತಂತೆ ಪ್ರಧಾನ ಮಂತ್ರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಲಿಖಿತವಾಗಿ ದೂರು ಸಲ್ಲಿಸಿದ್ದರು. 2018 ನಡೆದಿದ್ದ ವಿಧಾನಸಭೆ ಉಪಚುನಾವಣೆ ವೇಳೆ, ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಿ ಸಿ ಗೌರಿಶಂಕರ್ ಕ್ಷೇತ್ರದಲ್ಲಿನ 50 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅಂದಾಜು 40,000 ರೂ. ಮೌಲ್ಯದ ನಕಲಿ ವಿಮೆಯ ಬಾಂಡ್ಗಳನ್ನು ನೀಡಿದ್ದರು. ಅದರಲ್ಲಿ 16 ಸಾವಿರ ವಿದ್ಯಾರ್ಥಿಗಳಿಗೆ ನಕಲಿ ಸಮೂಹ ವಿಮೆಯ ಪಾಲಿಸಿ ವಿತರಣೆ ಮಾಡಿದ್ದರು ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದ್ದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ದೂರಿನ ಮೇರೆಗೆ ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೀಡಿದ್ದ ಸೂಚನೆಯ ಅನ್ವಯ 2020ರ ಜುಲೈ 18ರಂದು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಾಸಕ ಗೌರಿಶಂಕರ್ ವಿರುದ್ಧ ಎಫ್ಐಆರ್ ಕೂಡ ದಾಖಲು ಮಾಡಲಾಗಿತ್ತು. ಇದು ಪೂರ್ವ ನಿಯೋಜಿತ ಎಫ್ಐಆರ್ ಆಗಿದ್ದು, ಇದನ್ನು ರದ್ದುಪಡಿಸುವಂತೆ ಶಾಸಕ ಗೌರಿಶಂಕರ್ ಹೈಕೋರ್ಟ್ಗೆ ಮನವಿ ಮಾಡಿದ್ದರು. ಇವರ ಅರ್ಜಿಯನ್ನ ನ್ಯಾಯಾಲಯ ತಿರಸ್ಕಾರ ಮಾಡಿತ್ತು.
ಅಲ್ಲದೇ ಚುನಾವಣೆ ವೇಳೆ ಸರ್ಕಾರಿ ಶಾಲಾ ಮಕ್ಕಳಿಗೆ ನಕಲಿ ವಿಮೆ ಮಾಡಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಾಸಕ ಗೌರಿಶಂಕರ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಸಿಐಡಿ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.