ತುಮಕೂರು: ಇತ್ತೀಚಿನ ದಿನಗಳಲ್ಲಿ ಎಲ್ಲಾ ಕುಟುಂಬ ರಾಜಕಾರಣ ಹೆಚ್ಚಾಗಿದ್ದು, ಅವರು ದೇಶದ ಅಭಿವೃದ್ಧಿಗೆ ದುಡಿಯುವ ಬದಲು, ಅವರ ಕುಟುಂಬವನ್ನು ಬೆಳೆಸಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಕರ್ನಾಟಕ ರಿಪಬ್ಲಿಕ್ ಸೇನೆಯ ರಾಜ್ಯ ಅಧ್ಯಕ್ಷ ಜಿಗಣಿ ಶಂಕರ್ ವಿರೋಧ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ತುಮಕೂರಿನಿಂದ ಸುಲ್ತಾನ್ ಶರೀಫ್, ಕೋಲಾರದಿಂದ ಜಿ. ಚಿಕ್ಕ ನಾರಾಯಣ್, ಚಿಕ್ಕಬಳ್ಳಾಪುರದಿಂದ ಡಿ ಮುನಿರಾಜು, ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತ್ಯಾಗರಾಜ್ ಸ್ಪರ್ಧೆ ಮಾಡಲಿದ್ದಾರೆ ಎಂದರು.
ಉಳಿದಂತೆ ಚಿತ್ರದುರ್ಗ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮೈಸೂರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿಯೂ ನಮ್ಮ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.
ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ ಸ್ಪರ್ಧಿಸುವುದಿಲ್ಲ, ಬದಲಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಚಲನಚಿತ್ರ ನಟ ದಿ. ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡುವುದಾಗಿ ತಿಳಿಸಿದರು.