ತುಮಕೂರು : ಗುಬ್ಬಿ ಕ್ಷೇತ್ರದ ಉಚ್ಛಾಟಿತ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಅವರನ್ನು ಮರಳಿ ಒಳಗೆ ಬಾ ಯಾತ್ರಿಕನೇ ಎಂದು ಹೇಳುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ನಗರದಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು,
ನಮಗೆ ಯಾರ ಬಗ್ಗೆಯೂ ದ್ವೇಷವಿಲ್ಲ. ಒಂದು ಹಂತದಲ್ಲಿ ಅವರು ನಮ್ಮೊಂದಿಗೆ ಚೆನ್ನಾಗಿದ್ದರೂ ಕೆಟ್ಟ ಕಾಲದಿಂದಾಗಿ ದೂರವಾದರು. ಒಂದು ರೀತಿ ಚೌತಿಯಲ್ಲಿ ಚಂದ್ರನನ್ನು ನೋಡಿದ್ದಕ್ಕೆ ಕೃಷ್ಣನಿಗೂ ಕೆಟ್ಟ ಕಾಲ ಬಂದಿತ್ತು ಎಂದರು.
ವಾಪಸ್ ಜೆಡಿಎಸ್ ಪಕ್ಷಕ್ಕೆ ಬರಲು ದೇವರು ಎಸ್.ಆರ್.ಶ್ರೀನಿವಾಸ್‌ಗೆ ಒಳ್ಳೆಯ ಬುದ್ದಿ ಕೊಡಲಿ. ಅವರ ಪತ್ನಿ, ಮಗ ಕೂಡ ಒಳ್ಳೆಯವರಿದ್ದಾರೆ. ಮೊದಲು ಮನೆಯಲ್ಲಿ ಕುಳಿತು ಚಿಂತನೆ ಮಾಡಲಿ ಎಂದು ಹೇಳಿದರು. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಪ್ರಚಾರ ರಂಗೇರಿದ್ದು ಪಕ್ಷಗಳು ಗೆಲುವಿಗಾಗಿ ರಣತಂತ್ರ ರೂಪಿಸಿವೆ. ಇದರಂತೆ ಜೆಡಿಎಸ್ ಮುಖಂಡರು ಸದ್ದಿಲ್ಲದೇ ಶಾಸಕ ಎಸ್.ಆರ್.ಶ್ರೀನಿವಾಸ್ ಅವರನ್ನು ಮರಳಿ ಗೂಡು ಸೇರಿಸಲು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ.
ಈ ನಡುವೆ ನಾಗರಾಜ ಎಂಬ ವ್ಯಕ್ತಿಯನ್ನು ಹೆಚ್.ಡಿ.ಕುಮಾರಸ್ವಾಮಿ ಕ್ಷೇತ್ರದಲ್ಲಿ ಮುಂದಿನ ಜೆಡಿಎಸ್ ಅಭ್ಯರ್ಥಿ ಎಂದೇ ಘೋಷಿಸಿ ಸಂಘಟನೆಯಲ್ಲಿ ತೊಡಗುವಂತೆ ತಿಳಿಸಿದ್ದರು. ಆದರೆ ಗುಬ್ಬಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಾಗರಾಜ್ ಗೆಲುವು ಅಸಾಧ್ಯ ಎಂಬಂತಹ ಮಾಹಿತಿ ಲಭ್ಯವಾಗುತ್ತಿದ್ದಂತೆ ಇದೀಗ ಎಸ್.ಆರ್.ಶ್ರೀನಿವಾಸ್ ಅವರನ್ನೇ ಪಕ್ಷಕ್ಕೆ ವಾಪಸ್ ಕರೆತರುವ ಪ್ರಯತ್ನ ನಡೆಯುತ್ತಿದೆ.
ಇದನ್ನೂ ಓದ್ದಿ :ಶಾಸಕ ಶ್ರೀನಿವಾಸ್ ಹಂಚ್ತಿರುವ ಕುಕ್ಕರ್ ಸ್ಫೋಟಗೊಳ್ತಿವೆ: ಜೆಡಿಎಸ್ ಅಭ್ಯರ್ಥಿ ನಾಗರಾಜ್