ತುಮಕೂರು: 'ಪರಮೇಶ್ವರ್ ಹಟಾವೋ ಕಾಂಗ್ರೆಸ್ ಬಚಾವೋ' ಭಿತ್ತಿಪತ್ರ ಅಂಟಿಸಿದ ಪ್ರಕರಣದಲ್ಲಿ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಜೇಂದ್ರ ಸೇರಿದಂತೆ ನಾಲ್ವರ ಮೇಲೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಮೇ 25 ರಂದು ತುಮಕೂರು ನಗರದಲ್ಲಿ "ಪರಮೇಶ್ವರ್ ಹಟಾವೋ ಕಾಂಗ್ರೆಸ್ ಬಚಾವೋ" ಭಿತ್ತಿಪತ್ರ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಪೊಲೀಸರಿಗೆ ನೀಡಿದ ದೂರಿನ ಅನ್ವಯ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಮಾಜಿ ಕಾಂಗ್ರೆಸ್ ಶಾಸಕ ಕೆ.ಎನ್ ರಾಜಣ್ಣ ಪುತ್ರ ರಾಜೇಂದ್ರ ಸೇರಿ ಒಟ್ಟು ನಾಲ್ವರ ಮೇಲೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಕಾಂಗ್ರೆಸ್ನ ಮಾಜಿ ಜಿಲ್ಲಾ ಮಾಧ್ಯಮ ವಕ್ತಾರ ರಾಜೇಶ್ ದೊಡ್ಮನಿ, ಶಿವಪ್ರಸಾದ್, ರವಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಆರೋಪಿ ರಾಜೇಂದ್ರ ಬೆಂಗಳೂರಿನಿಂದ ಪೋಸ್ಟರ್‌ಗಳನ್ನು ತುಮಕೂರಿಗೆ ಬಸ್ ಮೂಲಕ ಕಳುಹಿಸಿದ್ದ ಎಂದು ವಿಚಾರಣೆ ವೇಳೆ ಮತ್ತೋರ್ವ ಆರೋಪಿ ರಾಜೇಶ್ ದೊಡ್ಮನಿ ತಿಳಿಸಿದ್ದಾನೆ. ರಾಜೇಶ್ ದೊಡ್ಮನಿ ಸೂಚನೆ ಮೇರೆಗೆ ಪೋಸ್ಟರ್ ಅಂಟಿಸಲಾಗಿತ್ತು ಎಂದು ಇನ್ನಿಬ್ಬರು ಆರೋಪಿಗಳಾದ ಶಿವಪ್ರಸಾದ್ ಹಾಗೂ ರವಿ ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ದೋಷಾರೋಪನೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ರಾಮಕೃಷ್ಣ ಅವರ ಕೃತ್ಯದ ವಿರುದ್ಧ ಎನ್ಇಪಿಎಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಕರ್ನಾಟಕ ಮುಕ್ತ ಸ್ಥಳಗಳ ವಿರೂಪಗೊಳಿಸುವ ಕಾಯ್ದೆ 1951 ಮತ್ತು 1981, ಐಪಿಸಿ ಸೆಕ್ಷನ್ 427ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.