ತುಮಕೂರು: ಅಂತಾರಾಜ್ಯ ಮಟ್ಕ ಕಿಂಗ್ ಪಿನ್ ಮನೆ ಮೇಲೆ ದಾಳಿ ಮಾಡಿದ ಸಿಸಿಬಿ ಅಧಿಕಾರಿಗಳು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ನಡೆದಿದೆ.
ಕರ್ನಾಟಕ ಮತ್ತು ಆಂಧ್ರಪ್ರದೇಶ ಮಟ್ಕಾ ಕಿಂಗ್ ಪಿನ್ ಅಶ್ವತ್ ಹಾಗೂ ಆತನ ಸಹೋದರನ ಮನೆ ಮೇಲೆ ದಾಳಿ ಮಾಡಿದ ಸಿಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಮಟ್ಕಾ ಚೀಟಿಗಳನ್ನು ಜಪ್ತಿ ಮಾಡಿ ಕಿಂಗ್ ಪಿನ್ ಅಶ್ವಥ್ ಸಹೋದರ ಕೃಷ್ಣಪ್ಪ ಹಾಗೂ ಮತ್ತಿಬ್ಬರನ್ನ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಮನೆಯಲ್ಲಿದ್ದ ಅಪಾರ ಪ್ರಮಾಣದ ಹಣ ಹಾಗೂ ಕಾಗದ ಪತ್ರಗಳನ್ನು ಸಹ ವಶಕ್ಕೆ ಪಡೆದಿದ್ದಾರೆ.
ಅಂತಾರಾಜ್ಯ ಮಟ್ಕಾ ಕಿಂಗ್ ಪಿನ್ ಆಗಿದ್ದ ಅಶ್ವಥ್ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ. ಈತನ ವಿರುದ್ಧ ನಿರಂತರವಾಗಿ ಮಟ್ಕಾ ದಂಧೆ ನಡೆಸುವ ಪ್ರಕರಣಗಳು ದಾಖಲಾಗುತ್ತಲೇ ಇದ್ದವು. ಪಾವಗಡ ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಮಟ್ಕಾ ನಡೆಸುತ್ತಿದ್ದ ಹಿನ್ನೆಲೆ ಆಂಧ್ರಪ್ರದೇಶ ಪೊಲೀಸರು ಈತನ ಮೇಲೆ ಪ್ರಕರಣ ದಾಖಲಿಸಿದ್ದರು.
ಹೀಗಾಗಿ 4 ತಿಂಗಳ ಹಿಂದಷ್ಟೆ ಪಾವಗಡ ಪೊಲೀಸರು ಈತನನ್ನು ಬಂಧಿಸಿದ್ದರು. ನಂತರ ಈತ ಎರಡೂ ರಾಜ್ಯದ ಗಡಿಗಳಲ್ಲಿ ಮಟ್ಕಾ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಆದರೆ ಇತ್ತೀಚೆಗಷ್ಟೆ ಈತ ಬೇಲ್ ಮೇಲೆ ಹೊರಬಂದಿದ್ದ.
ಅಶ್ವತ್ ಬಹಿರಂಗವಾಗಿ ಮಟ್ಕಾ ದಂಧೆ ನಡೆಸುತ್ತಿಲ್ಲವಾದರೂ ತನ್ನ ಸಹೋದರನ ಮೂಲ್ಕ ದಂಧೆ ನಡೆಸುತ್ತಿದ್ದ ಎಂಬ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಈತನ ಸಹೋದರನ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಮುಖ್ಯವಾಗಿ ಮಟ್ಕಾ ದಂಧೆಕೋರರೊಂದಿಗಿನ ಸಂಪರ್ಕದ ಮಾಹಿತಿ ಹಾಗೂ ಮುಂಬೈ ಮೂಲದ ಮಟ್ಕಾ ದಂಧೆಕೋರರರ ಕುರಿತ ದಾಖಲೆಗಳನ್ನು ಸಿಸಿಬಿ ಪೊಲೀಸರು ದಾಳಿ ವೇಳೆ ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಎಷ್ಟು ಹಣ ವಶಕ್ಕೆ ಪಡೆಯಲಾಗಿದೆ ಎಂಬುದನ್ನು ಸಿಸಿಬಿ ಪೊಲಿಸರು ಬಹಿರಂಗಪಡಿಸಿಲ್ಲ. ಈ ಸಂಬಂಧ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.