ತುಮಕೂರು: ಪಾಕಿಸ್ತಾನ ಕಾಂಗ್ರೆಸ್ನ ಪಾಪದ ಕೂಸು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ರಚನೆಗೆ ಕಾಂಗ್ರೆಸ್ ಕಾರಣ. ಅಕ್ರಮ ನುಸುಳುಕೋರರಿಗೂ ಪೌರತ್ವ ಕೊಡಬೇಕೆಂದು ಪ್ರತಿಪಾದಿಸುತ್ತಿರುವ ಕಾಂಗ್ರೆಸ್ ಏನು ಮಾಡಲು ಹೊರಟಿದೆ ಎಂದು ಪ್ರಶ್ನಿಸಿದರು. ಪೌರತ್ವ ಕಾಯ್ದೆಗೆ ಸಂಬಂಧಿಸಿದಂತೆ ಪಿತೂರಿ ನಡೆಯುತ್ತಿದೆ. ಕಾಂಗ್ರೆಸ್, ತಾಲಿಬಾನಿಗಳು, ಕಮ್ಯುನಿಸ್ಟ್ರು ಪಿತೂರಿಯ ಭಾಗವಾಗಿದ್ದಾರೆ. ಪಾಕಿಸ್ತಾನದಿಂದ, ಅಫ್ಗಾನಿಸ್ಥಾನದಿಂದ, ಬಾಂಗ್ಲಾದೇಶದಿಂದ ಧಾರ್ಮಿಕ ಕಾರಣದಿಂದ, ಭಯೋತ್ಪಾದನೆಗೆ ಒಳಗಾಗಿ ಬಂದವರು ನಿರಾಶ್ರಿತರಾಗಿದ್ದಾರೆ. ಭಾರತ ಅವರಿಗೆಲ್ಲ ಆಶ್ರಯ ಕೊಡ್ತಿದೆ. ಅಕ್ರಮ ನುಸುಳು ಕೋರರಿಗೂ ಪೌರತ್ವ ಕೊಡಬೇಕು ಎಂದರೆ ಭಯೋತ್ಪಾದಕರಿಗೂ ಕೊಡಬೇಕು ಎಂಬ ಅರ್ಥವಲ್ಲವೇ?. ನಮ್ಮ ದೇಶದ ನಾಗರಿಕರ ರಕ್ಷಣೆ ನಮ್ಮ ಕರ್ತವ್ಯ. ಆ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ತಾಲಿಬಾನಿಗಳ ಜೊತೆ ಸೇರಿ ನರೇಂದ್ರ ಮೋದಿ ಸರ್ಕಾರವನ್ನು ಉರುಳಿಸುವ ಸಂಚು ಮಾಡುತ್ತಿದ್ದಾರೆ. ಇದಕ್ಕೆ ದೇಶದ ಜನ ಅವಕಾಶ ಕೊಡುವುದಿಲ್ಲ ಎಂದರು.
ಇನ್ನು, ಸಿದ್ಧಗಂಗಾ ಮಠದಲ್ಲಿ ಶ್ರೀ ಶಿವಕುಮಾರಸ್ವಾಮೀಜಿ ಗದ್ದುಗೆ ದರ್ಶನ ಪಡೆದು, ನಂತರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರಿಂದ ಆರ್ಶೀವಾದ ಪಡೆದರು.