ತುಮಕೂರು: ಮದುವೆ ಕಾರ್ಯಕ್ಕೆ ಹೊರಟಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮೆಕ್ಕೇರಹಳ್ಳಿ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ.
ವಿನಾಯಕ ಹೆಸರಿನ ಖಾಸಗಿ ಬಸ್ನಲ್ಲಿ ತೋವಿನಕೆರೆ ಸಮೀಪದ ಶಂಬೆನಹಳ್ಳಿ ಗೊಳ್ಳರಹಟ್ಟಿ ಗ್ರಾಮದಿಂದ ಶಿರಾ ತಾಲೂಕಿನ ಬುಕ್ಕಾಪಟ್ಟಣ ಗ್ರಾಮಕ್ಕೆ ಮದುವೆ ಕಾರ್ಯಕ್ರಮಕ್ಕೆ ಹೊರಟಿದ್ದರು. ಈ ವೇಳೆ ಶಿರಾ ತಾಲೂಕಿನ ಮೇಕೆರಹಳ್ಳಿ ಬಳಿ ಬಸ್ ಆಯತಪ್ಪಿ ಉರುಳಿ ಬಿದ್ದಿದೆ ಎನ್ನಲಾಗ್ತಿದೆ.
ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
ಶಿರಾ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.