ತುಮಕೂರು : ಈಗಾಗಲೇ ಉಸ್ತುವಾರಿ ಅರುಣ್ ಸಿಂಗ್ ಸಭೆ ನಡೆಸಿ ಚರ್ಚೆ ಮಾಡಿದ್ದಾರೆ. ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯುತ್ರಾರೆ ಎಂದು ಹೇಳಿದ್ದಾರೆ. ಸೂರ್ಯ-ಚಂದ್ರ ಇರೋದು ಎಷ್ಟು ಸತ್ಯನೋ ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯೋದು ಅಷ್ಟೇ ಸತ್ಯ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ತಿಳಿಸಿದ್ದಾರೆ.
ತುಂಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತೆ. ವಿಜಯೇಂದ್ರ ಖಾಸಗಿ ಕಾರಣಕ್ಕೆ ದೆಹಲಿ ಭೇಟಿ ಮಾಡಿರಬಹುದು ಅಥವಾ ನಾಯಕರನ್ನು ಭೇಟಿ ಮಾಡಿರಬಹುದು, ಅದು ನನಗೆ ಗೊತ್ತಿಲ್ಲ ಎಂದರು. ಸಂಸದ ರಾಘವೇಂದ್ರ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಿ ಸಿಎಂ ಯಡಿಯೂರಪ್ಪರನ್ನ ಕೆಳಗಿಳಿಸುವ ವಿಚಾರ ನನಗೆ ಗೊತ್ತಿಲ್ಲ. ಇದೆಲ್ಲಾ ಊಹಾಪೋಹ ಎಂದರು.
ಪರೀಕ್ಷೆ ಬರೆದಿದ್ದೇನೆ, ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ ಎಂಬ ಸಚಿವ ಸಿ ಪಿ ಯೋಗೇಶ್ವರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪರೀಕ್ಷೆ ಬರೆದವರಿಗೆ ಅವರ ಹಣೆಬರಹ ಗೊತ್ತಿರತ್ತೆ. ಎಷ್ಟು ಮಾರ್ಕ್ಸ್ ಬರತ್ತೆ ಅಂತ ಅವರಿಗೆ ಗೊತ್ತಿರತ್ತೆ. ನಿಜವಾದ ಪರೀಕ್ಷೆ ಬರೆದವರು ಫೇಲಾಗಿದ್ದಾರೆ ಎಂದರು.
ಯಾರು ನಕಲಿ ಪರೀಕ್ಷೆ ಬರೆದಿದ್ದಾರೋ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಿ ಪಿ ಯೋಗೇಶ್ವರ್ ಅವರದ್ದು ನಕಲಿ ಪರೀಕ್ಷೆ. ರಾಷ್ಟ್ರೀಯ ನಾಯಕರು ಯಡಿಯೂರಪ್ಪಗೆ ಈಗಾಲೇ ಒಳ್ಳೆಯ ಕೆಲಸದ ಆಧಾರದ ಮೇಲೆ ಅಂಕ ಕೊಟ್ಟಿದ್ದಾರೆ ಎಂದರು.
ಮುಂದಿನ ಚುನಾವಣೆಗೆ ಎರಡು ವರ್ಷ ಬಾಕಿ ಇದೆ. ಆಗಲೇ ಕಾಂಗ್ರೆಸ್ ನಾಯಕತ್ವದ ಬಗ್ಗೆ ಕಚ್ಚಾಟ ನಡೆಯುತ್ತಿದೆ. ಕಾಂಗ್ರೆಸ್ 20 ಸ್ಥಾನಕ್ಕೆ ಸೀಮಿತವಾಗಿರುತ್ತೆ. ಕಾಂಗ್ರೆಸ್ ಮತ್ತೊಮ್ಮೆ ಜನರಿಂದ ಸಂಪೂರ್ಣ ತಿರಸ್ಕಾರವಾಗುತ್ತೆ ಎಂದರು.
ರಮೇಶ್ ಜಾರಕಿಹೊಳಿ ಪಾರ್ಟಿಯಲ್ಲಿ ನನಗೆ ಚೂರಿ ಹಾಕಿದ್ದಾರೆ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ನಾವು ಅವರು ಅನೇಕ ಬಾರಿ ಮೀಟಿಂಗ್ ಮಾಡಿದ್ದೇವೆ. ರಾಜೀನಾಮೆ ವಿಚಾರದಲ್ಲಿ ಅವರು ಸಮಾಧಾನವಾಗಿರಲಿ ಎಂದರು.