ತುಮಕೂರು : ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ 'ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ ಹಾಗೂ ರೈತರ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆ' ಗಳ ಕುರಿತು ರೈತ ಸಂಘಟನೆಗಳು ಹಾಗೂ ರೈತರನ್ನು ಕಾಂಗ್ರೆಸ್ ಪಕ್ಷವು ಉದ್ದೇಶಪೂರ್ವಕ ದಾರಿ ತಪ್ಪಿಸುತ್ತಿದೆ ಎಂದು ಬಿಜೆಪಿ ರೈತ ಘಟಕದ ಉಪಾಧ್ಯಕ್ಷ ಶಿವಪ್ರಸಾದ್ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ವ್ಯವಸ್ಥಿತವಾಗಿ ಕಾಂಗ್ರೆಸ್ ಪಕ್ಷವು ಮಸೂದೆ ವಿರೋಧಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಗ್ಗೆ ಗೊಂದಲ ಮೂಡಿಸುವ ಪ್ರಯತ್ನಕ್ಕೆ ಕೈಹಾಕಿದೆ ಎಂದು ದೂರಿದರು. ರೈತ ಸಂಘಗಳು ಕೆಲ ತಪ್ಪು ತಿಳುವಳಿಕೆಯಿಂದ ಈ ರೀತಿ ಪ್ರತಿಭಟನೆ ಮಾಡುತ್ತಿವೆ. ಈ ಮಸೂದೆಯ ಕುರಿತು ಸರ್ಕಾರ ರೈತರಿಗೆ ಅರಿವು ಮೂಡಿಸಲಿದೆ ಎಂದರು.
ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ ನೂತನ ಮಸೂದೆಯನ್ವಯ ರೈತರಿಗೆ ಮತ್ತು ವ್ಯಾಪಾರಿಗಳಿಗೆ ತಮಗಿಷ್ಟ ಬಂದ ಕಡೆ ಕೃಷಿ ಉತ್ಪನ್ನ ಮತ್ತು ಖರೀದಿ ಮಾಡುವ ಸ್ವಾತಂತ್ರ ನೀಡಲಾಗಿದೆ. ವ್ಯಾಪಾರ ವ್ಯವಸ್ಥೆ ಮೂಲಕ ಬೆಳೆಗಳಿಗೆ ನ್ಯಾಯಯುತ ಬೆಲೆ ನಿಗದಿಪಡಿಸಲು ಅವಕಾಶ ನೀಡಲಾಗಿದೆ. ಕೃಷಿ ಉತ್ಪನ್ನಗಳನ್ನು ಅಂತಾರಾಜ್ಯ ಹಾಗೂ ಪಾರದರ್ಶಕವಾಗಿ ಮತ್ತು ತಡೆರಹಿತವಾಗಿ ವ್ಯಾಪಾರ ಮಾಡಲು ಉತ್ತೇಜನ ನೀಡಲಾಗಿದೆ.
ಉತ್ಪನ್ನಗಳ ಆನ್ಲೈನ್ ವ್ಯಾಪಾರಕ್ಕೆ ಒತ್ತು ನೀಡಲು ಕಾನೂನಾತ್ಮಕ ಚೌಕಟ್ಟನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು. ರೈತರ (ಕಲ್ಯಾಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆ ಮೂಲಕ ಕೃಷಿ ಉದ್ಯಮ ಸಂಸ್ಥೆಗಳು, ಸಗಟು ವ್ಯಾಪಾರಿಗಳು, ರಫ್ತುದಾರರು ಮತ್ತು ಚಿಲ್ಲರೆ ವ್ಯಾಪಾರಿಗಳೊಂದಿಗೆ ವಹಿವಾಟು ನಡೆಸಲು ರೈತರಿಗೆ ಭದ್ರತೆ ಮತ್ತು ಪ್ರೋತ್ಸಾಹ ನೀಡುವ ಕೃಷಿ ಒಪ್ಪಂದಗಳ ಕುರಿತು ರಾಷ್ಟ್ರೀಯ ಚೌಕಟ್ಟು ನಿರ್ಮಿಸುವ ಧ್ಯೇಯ ಹೊಂದಲಾಗಿದೆ. ನ್ಯಾಯಯುತ ಚೌಕಟ್ಟಿನೊಳಗೆ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಕೃಷಿ ಸೇವೆಯನ್ನು ಒದಗಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಎರಡು ಮಸೂದೆಗಳು ದೇಶದ ಕೃಷಿ ವಲಯದಲ್ಲಿ ಕ್ರಾಂತಿ ತರಲಿವೆ. ಕೃಷಿ ವಲಯದಿಂದ ದೇಶಕ್ಕಿರುವ ನಿರೀಕ್ಷೆ ಹಾಗೂ ಅಗತ್ಯತೆ ಎರಡನ್ನು ಹೊಸ ಮಸೂದೆಗಳು ಪೂರೈಸಲಿವೆ. ಮಸೂದೆಯಿಂದ ಉತ್ತಮ ಬೆಳೆ ಬೆಳೆಯುವ ರೈತರು ಪ್ರೇರಿತರಾಗುತ್ತಾರೆ. ಒಮ್ಮೆ ಹೆಚ್ಚುವರಿ ಇಳುವರಿ ಪಡೆದ ರೈತರ ಆದಾಯವು ಸಹಜವಾಗಿ ಹೆಚ್ಚುತ್ತದೆ ಎಂದು ತಿಳಿಸಿದರು.