ತುಮಕೂರು: ಲಾಕ್ಡೌನ್ ಸಂದರ್ಭದಲ್ಲಿ ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಕೆಲವೇ ಮಂದಿ ಮಾತ್ರ ರಸ್ತೆಗಳಲ್ಲಿ ಕಾಣಸಿಗುತ್ತಾರೆ. ನಿರ್ಗತಿಕರು ಹಾಗೂ ಬಡವರಿಗೆ ಹಲವು ಸಂಘ ಸಂಸ್ಥೆಗಳು ಊಟದ ವ್ಯವಸ್ಥೆ ಮಾಡುತ್ತಿವೆ. ಆದರೆ ಈ ನಡುವೆ ನಿರಂತರವಾಗಿ ಕೆಲಸ ನಿರ್ವಹಿಸುವ ಕೆಲ ಪೊಲೀಸರ ದಾಹವನ್ನು ನೀಗಿಸಲು ಬಿಬಿಎಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಪ್ರೀತಮ್ ಮುಂದಾಗಿದ್ದಾರೆ.
ತಮ್ಮ ಸಂಬಂಧಿಕರೊಂದಿಗೆ ಕಾರಿನಲ್ಲಿ ಬಿಸ್ಕೆಟ್ ಹಾಗೂ ತಂಪು ಪಾನೀಯವನ್ನು ತುಂಬಿಕೊಂಡು ಬಂದು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಬಳಿ ತೆರಳಿ ವಿತರಿಸುತ್ತಿದ್ದಾರೆ.
ಅದರಲ್ಲೂ ತುಮಕೂರು ನಗರದ ಸುತ್ತಲೂ 14 ಕಡೆ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದ್ದು, ಇವುಗಳ ಬಳಿ ಪೊಲೀಸರು ಸುಡು ಬಿಸಿಲಿನಲ್ಲಿಯೇ ನಿಂತು ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಗೆ ಸಮಯಕ್ಕೆ ಸರಿಯಾಗಿ ಈಗಾಗಲೇ ಊಟದ ವ್ಯವಸ್ಥೆಯನ್ನೇನೋ ಜಿಲ್ಲಾಡಳಿತದ ವತಿಯಿಂದ ಪೂರಕವಾಗಿ ಮಾಡಲಾಗಿದೆ.
ಈ ನಡುವೆ ಲಾಲ್ಡೌನ್ ಸಂದರ್ಭದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ಖಾಕಿ ಪಡೆಯ ದಾಹ ನೀಗಿಸಲು ಪ್ರೀತಮ್ ಸದ್ದಿಲ್ಲದೆ ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಇನ್ನು ಪ್ರೀತಮ್ ಅವರ ತಂದೆ ಕೂಡ ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.