ತುಮಕೂರು: ನೂತನ ವರ್ಷಾಚರಣೆ ವೇಳೆ ಪ್ರತಿಯೊಬ್ಬರು ಕೊರೊನಾ ಸೋಂಕಿನ ಹರಡುವಿಕೆಯ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಸೋಂಕಿನ ಬಗೆಗೆ ಜನ ಎಚ್ಚರಿಕೆ ವಹಿಸಬೇಕು ಎಂದು ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಸಲಹೆ ನೀಡಿದರು.
'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಶ್ರೀಗಳು, ಭಾರತೀಯ ಪರಂಪರೆಯಲ್ಲಿ ಯುಗಾದಿ ನಮಗೆ ಹೊಸ ಸಂವತ್ಸರ. ಆದರೆ ವ್ಯವಹಾರಿಕ ದೃಷ್ಟಿಯಿಂದ ಜನವರಿ 01ನ್ನು ಜನರು ಹೊಸವರ್ಷವೆಂದು ಆಚರಿಸುತ್ತಿದ್ದಾರೆ. ಆದರೆ ಭಕ್ತರು ಪ್ರತಿದಿನವನ್ನು ಹೊಸ ವರ್ಷವೆಂದು ಪರಿಗಣಿಸಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕೆಂದು ಕರೆ ನೀಡಿದರು.
ಕಷ್ಟಗಳು ಬಂದಾಗ ಧೃತಿಗೆಡದೆ, ಸುಖ ಬಂದಾಗ ಅಶಕ್ತರಿಗೆ ನೆರವಾಗುವ ಮೂಲಕ ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳಬೇಕು. ಕೊರೊನಾ ಸೋಂಕಿನ ಹರಡುವಿಕೆ ಸಂದರ್ಭದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ. ಇದಕ್ಕೆ ಪೂರಕವಾಗಿ ಯೋಗಾಸನವನ್ನು ದಿನನಿತ್ಯದ ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ಪ್ರಾಣಾಯಾಮ, ಧ್ಯಾನ ಇವುಗಳನ್ನು ಅನುಸರಿಸುವ ಮೂಲಕ ಜನರು ಆತ್ಮತೃಪ್ತಿಯನ್ನು ಪಡೆದುಕೊಳ್ಳಬೇಕಿದೆ ಎಂದರು.
ಕೊರೊನಾ ಸೋಂಕು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ನಿಯಮದ ಅನುಸಾರ ಸಿದ್ದಗಂಗಾಮಠಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಭಕ್ತರು ನೂತನ ವರ್ಷದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಸಂಕಲ್ಪ ಮಾಡಬೇಕು ಎಂದು ಶ್ರೀಗಳು ಕಿವಿಮಾತು ಹೇಳಿದರು.
ಇದನ್ನೂ ಓದಿ: ಮದ್ಯಪ್ರಿಯರಿಗೆ ಕಾಡದ ನೈಟ್ ಕರ್ಫ್ಯೂ : ಕಳೆದ ವರ್ಷಕ್ಕಿಂತಲೂ ಅಧಿಕ ಮಾರಾಟ