ತುಮಕೂರು : ಕರ್ತವ್ಯನಿರತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಪಂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಆರೋಪದಡಿ ಓರ್ವನ ವಿರುದ್ಧ ಪ್ರಕರಣ ದಾಖಲಾಗಿದೆ.
ತಿಪಟೂರು ತಾಲೂಕು ಗುರುಗದಹಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಕರ್ ಬಿಲ್ಲೂರು ಹಾಗೂ ನೀರುಗಂಟಿ ಯೋಗೀಶಯ್ಯ ಅವರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಗ್ರಾಮದ ರಘು ಹಲ್ಲೆ ನಡೆಸಿದ್ದಾರೆ ಎಂದು ಪಿಡಿಒ ದೂರಿದ್ದಾರೆ. ಸಾರ್ವಜನಿಕ ನಲ್ಲಿಗೆ ಮೋಟರ್ ಅಳವಡಿಸಿ, ನೀರು ಪಡೆಯುತ್ತಿದ್ದರು. ಈ ರೀತಿ ಮೋಟಾರನ್ನು ಅಳವಡಿಸಿದರೆ ಮುಂದಿನ ಮನೆಗಳ ನೀರು ಸರಬರಾಜಿಗೆ ಅಡಚಣೆ ಆಗಲಿದೆ.
ಹೀಗಾಗಿ ಮೋಟಾರ್ ತೆರವುಗೊಳಿಸಿ ವಶಕ್ಕೆ ತೆಗೆದುಕೊಳ್ಳಲು ಪಿಡಿಒ ಮುಂದಾಗಿದ್ದಾರೆ. ಇದಕ್ಕೆ ತೀವ್ರವಾಗಿ ಆಕ್ಷೇಪಿಸಿದ ಗ್ರಾಮದ ರಘು ಎಂಬುವರು, ಪಿಡಿಒ ಮತ್ತು ನೀರುಗಂಟಿಯ ಮೇಲೆ ಹಲ್ಲೆ ಮಾಡಿ ನಿಂದಿಸಿದ್ದಾರೆ. ಹಲ್ಲೆಗೊಳಗಾದ ಪಿಡಿಒ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.