ತುಮಕೂರು: ಪಿಎಸ್‌ಐ ಹುದ್ದೆಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಾಮಾಣಿಕ ಮತ್ತು ಪಾರದರ್ಶಕ ತನಿಖೆ ನಡೆಯುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿಕುಮಾರ್ ಅವರಿಗೆ ಬಹಳ ದಿನಗಳಿಂದ ಹೇಳುತ್ತಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿಮ್ಮ ಬಳಿ ಏನಿದೆಯೋ ಆ ಮಾಹಿತಿಯನ್ನ ನಮಗೆ ನೀಡಿ ಅಥವಾ ಸಿಐಡಿಗೆ ನೀಡಿ. ನಾವು ಇಷ್ಟೊಂದು ಚೆನ್ನಾಗಿ ತನಿಖೆ ಮಾಡ್ತಿದ್ದೇವೆ, ಸುಮ್ಮನೆ ಕಾಮೆಂಟ್ ಮಾಡಬಾರದು. ಇತಿಹಾಸದಲ್ಲೇ ಯಾರು ಈ ರೀತಿ ತನಿಖೆ ಮಾಡಿಲ್ಲ ಎಂದರು.
ಸಿದ್ದರಾಮಯ್ಯನವರ ಸರ್ಕಾರದಲ್ಲಿ ಪೊಲೀಸ್ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಆದ್ರೆ ಆರೋಪಿಗಳನ್ನ ಬಂಧಿಸಲಿಲ್ಲ. ನಾವು ಶಕ್ತಿ ಪ್ರದರ್ಶನ ಮಾಡಿದ್ದೇವೆ. ಸಿಐಡಿಗೆ ಫ್ರೀ ಹ್ಯಾಂಡ್ ಕೊಟ್ಟು, ತಪ್ಪಿತಸ್ಥರನ್ನು ಬಂಧಿಸಿದ್ದೇವೆ. ಸುಮ್ಮನೆ ಹೇಳಿಕೆ ನೀಡುವುದು ಸೂಕ್ತವಲ್ಲ. ಆಧಾರವಿಲ್ಲದೆ ಬೇರೆಯವರ ಚಾರಿತ್ರ್ಯ ಹರಣ ಮಾಡಲಿಕ್ಕಾಗಿ, ರಾಜಕೀಯ ಲಾಭಕ್ಕಾಗಿ ಹೆಸರು ಹೇಳಿದರೆ ಪ್ರಯೋಜನವಾಗುವುದಿಲ್ಲ, ಸಾಕ್ಷಿ ನೀಡಿ ಎಂದು ಒತ್ತಾಯಿಸಿದರು.
ಚಂದ್ರಶೇಖರ ಗುರೂಜಿ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ನಮ್ಮ ಹುಬ್ಬಳ್ಳಿ ರಾಮದುರ್ಗ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಜೆಸಿಬಿ ಅಡ್ಡ ಇಟ್ಟು ಕಾರನ್ನು ತಡೆದಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ರು ಆರೋಪಿಗಳು ಮಹಾರಾಷ್ಟ್ರ ಗಡಿ ದಾಟುತ್ತಿದ್ದರು. ಪೊಲೀಸರ ಕಾರ್ಯವೈಖರಿ ಬಗ್ಗೆ ಹೆಮ್ಮೆ ಇದೆ. ನಾಳೆ ಆ ಪೊಲೀಸರನ್ನ ಭೇಟಿ ಮಾಡ್ತೇನೆ. ಅವರಿಗೆ ಬಹುಮಾನ ಘೋಷಣೆ ಮಾಡಿ ಸರ್ಟಿಫಿಕೇಟ್ ಕೊಡ್ತೀವಿ ಎಂದು ಹೇಳಿದರು.
ಎಡಿಜಿಪಿ ಬಂಧನ ಕಣ್ಣೊರೆಸುವ ತಂತ್ರ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಅವರ ಕಾಲದಲ್ಲಿ ಎಷ್ಟು ಹಗರಣ ನಡೆದಿವೆ ಎಂದು ನಾನು ತುಂಬಾ ದಾಖಲಾತಿ ನೀಡಿದ್ದೇನೆ. ಅವರ ಕಾಲದಲ್ಲಿ ನಡೆದ ಹಗರಣಗಳನ್ನು ಮುಚ್ಚಿಹಾಕಿದ್ದಾರೆ. ಆದ್ರೆ ನಾವು ಯಾವುದೇ ಪ್ರಕರಣವನ್ನ ಮುಚ್ಚಿ ಹಾಕುವ ಪ್ರಯತ್ನ ಮಾಡಿಲ್ಲ. 50 ಜನ ಅರೆಸ್ಟ್ ಆದವರಲ್ಲಿ 20 ಜನ ಪೊಲೀಸರಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಹಗರಣ: 2,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ ಸಿಐಡಿ