ತುಮಕೂರು: ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ದರ ಗಗನಕ್ಕೆ ಏರುತ್ತಿದೆ. ಹೀಗಿರುವಾಗ ಜಿಲ್ಲೆಯ ಪೆಟ್ರೋಲ್ ಬಂಕ್ವೊಂದರಲ್ಲಿ ವಾಹನಗಳಿಗೆ ಪೆಟ್ರೋಲ್ ಹಾಕದೇ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟೀಕೆರೆ ಗ್ರಾಮದ ಪೆಟ್ರೋಲ್ ಬಂಕ್ನಲ್ಲಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆ ಎನ್ನುವ ದೂರು ಕೇಳಿ ಬಂದಿದೆ. ವಾಹನಕ್ಕೆ ಪೆಟ್ರೋಲ್ ಹಾಕದಿದ್ದರೂ ಕೂಡ ಏಕಾಏಕಿ ಮೀಟರ್ ರನ್ನಿಂಗ್ ಆಗಿದೆ ಎನ್ನಲಾಗ್ತಿದೆ.
ಪೆಟ್ರೋಲ್ ಗನ್ ಕೈಯಲ್ಲಿ ಇದ್ದರೂ ಪೆಟ್ರೋಲ್ ತುಂಬಿಸಿದಂತೆ ಮೀಟರ್ ರನ್ ಆಗಿದೆ. ಗ್ರಾಹಕರೊಬ್ಬರು ಪೆಟ್ರೋಲ್ ಹಾಕಿಸಿಕೊಳ್ಳಲು ಹೋದಾಗ ಈ ಮೋಸದಾಟ ಬೆಳಕಿಗೆ ಬಂದಿದೆ.
ಪೆಟ್ರೋಲ್ ಬಂಕ್ ಸಿಬ್ಬಂದಿ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ರೀತಿ ತೂಕ ಮತ್ತು ಅಳತೆಯಲ್ಲಿ ನಡೆಯುತ್ತಿರುವ ಮೋಸದ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಬಂಕ್ ಮಾಲೀಕನನ್ನು ಕೇಳಿದ್ರೆ, ಈ ಕುರಿತು ಸಿಬ್ಬಂದಿಯನ್ನು ವಿಚಾರಿಸಿ ಮಾಹಿತಿ ನೀಡುವುದಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೂ ಯಾವುದೇ ದೂರುಗಳು ದಾಖಲಾಗಿಲ್ಲ.