ತುಮಕೂರು: ವಂಚಕರು ಅಪಾರ್ಟ್ಮೆಂಟ್ನಲ್ಲಿ ಮೂರ್ನಾಲ್ಕು ಫ್ಲ್ಯಾಟ್ಗಳನ್ನು ಬಾಡಿಗೆಗೆ ಪಡೆದು, ಫೇಸ್ಬುಕ್ನಲ್ಲಿ ಕೆಲಸದ ಬಗ್ಗೆ ಜಾಹೀರಾತು ಕೊಟ್ಟು, ಅಮಾಯಕರನ್ನು ವಂಚಿಸಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತುಮಕೂರಿನ ಊರುಕೆರೆ ಬಳಿಯ ಸ್ವರ್ಣಗೃಹ ಅಪಾರ್ಟ್ಮೆಂಟ್ನಲ್ಲಿ ವಂಚಕರು ಮನೆಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಈ ಜಾಹೀರಾತು ನೋಡಿ ಜಿಲ್ಲೆಯ 30ಕ್ಕೂ ಹೆಚ್ಚು ಯುವಕ-ಯುವತಿಯರು ಇವರನ್ನು ಸಂಪರ್ಕ ಮಾಡಿದ್ದಾರೆ. ಅಲ್ಲದೇ ನೋಂದಣಿಗೆಂದು 2,500 ರೂ. ಸಹ ತೆಗೆದುಕೊಂಡಿದ್ದಾರೆ.
ಎರಡು ಮೂರು ದಿನ ಟ್ರೈನಿಂಗ್ ಕೊಡುವ ನೆಪದಲ್ಲಿ ಕಳ್ಳಾಟವಾಡಿದ್ದಾರೆ. ಬಳಿಕ ಇದೊಂಥರ ಚೈನ್ ಲಿಂಕ್, ನೀವು ಎಷ್ಟು ಮಂದಿಯನ್ನ ನಮ್ಮ ಕಂಪನಿಗೆ ಸೇರಿಸುತ್ತಿರೋ ಅಷ್ಟೇ ಲಾಭ ಇದೆ. ನಿಮಗೆ ಕಮಿಷನ್ ಸಿಗುತ್ತೆ ಎಂದು ಬ್ರೈನ್ ವಾಷ್ ಮಾಡಿದ್ದಾರೆ. ಅಲ್ಲದೇ ಕೆಲಸ ಕೇಳಿಕೊಂಡು ಬಂದಿದ್ದ ಕೆಲ ಯುವತಿಯರಿಗೆ ಇಲ್ಲಸಲ್ಲದ ಆಸೆ ಹುಟ್ಟಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿದೆ.
ಇದನ್ನೂ ಓದಿ: ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ, ಕುಟುಂಬಸ್ಥರ ಪ್ರತಿಭಟನೆ
ಮೋಸ ಹೋಗಿರೋದು ಗೊತ್ತಾಗುತ್ತಿದ್ದಂತೆ ನಮ್ಮ ಹಣ ಕೊಡಿ ಎಂದು ಕೇಳಿದ್ರೆ ರೌಡಿಗಳನ್ನು ಕರೆಸಿ ಹಲ್ಲೆ ಮಾಡಿಸಿದ್ದಾರಂತೆ. ಪೊಲೀಸರಿಗೆ ದೂರು ಕೊಟ್ಟರೆ ಕೊಲೆ ಮಾಡುತ್ತೇವೆ ಎಂದು ಬೆದರಿಸಿದ್ದಾರಂತೆ. ಇನ್ನೊಂದೆಡೆ ಯುವತಿಯರಿಗೆ ಖಾಸಗಿ ವಿಡಿಯೋ ಫೋಟೋಗಳನ್ನು ತೋರಿಸಿ ಬ್ಲಾಕ್ ಮೇಲ್ ಸಹ ಮಾಡುತ್ತಿದ್ದಾರಂತೆ. ವಂಚಕರ ಜಾಲಕ್ಕೆ ಸಿಲುಕಿ ನರಳಿದ ಹಲವರಲ್ಲಿ ಕೆಲವರು ಧೈರ್ಯ ಮಾಡಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳು ಇದ್ದ ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.