ತುಮಕೂರು: ಸರ್ಕಾರ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದು, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ವಂಶಿಕೃಷ್ಣ ಸೂಚಿಸಿದ್ದಾರೆ.
ಶೈಕ್ಷಣಿಕ ಸಂಸ್ಥೆಗಳು ಮುಚ್ಚಲ್ಪಡುತ್ತವೆ. ಆನ್‍ಲೈನ್ ಶಿಕ್ಷಣ ಮುಂದುವರೆಯುತ್ತದೆ. ಸಿನಿಮಾ, ಶಾಪಿಂಗ್ ಮಾಲ್, ಯೋಗ ಕೇಂದ್ರ, ಕ್ರೀಡಾಂಗಣ, ಈಜುಕೊಳ, ಜಿಮ್ ಸೆಂಟರ್, ಕ್ಲಬ್, ಪಾರ್ಕ್ ಸೇರಿದಂತೆ ಮನರಂಜನಾತ್ಮಕ ಕೇಂದ್ರಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈಜು ಒಕ್ಕೂಟದಿಂದ ಅಂಗೀಕೃತಗೊಂಡ ಈಜುಕೊಳಗಳಲ್ಲಿ ಕ್ರೀಡಾಪಟುಗಳ ತರಬೇತಿಗೆ ಮಾತ್ರ ಅವಕಾಶವಿರುತ್ತದೆ. ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಭೆ, ಸಮಾರಂಭ, ಮತ್ತಿತರ ಕೂಟಗಳು ಹಾಗೂ ಬೃಹತ್ ಸಭೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ದೈನಂದಿನ ಪೂಜೆಗಳನ್ನು ನೆರವೇರಿಸಲು ಅನುಮತಿಸಲಾಗಿದೆ. ರೆಸ್ಟೋರೆಂಟ್, ಬೇಕರಿ ಮತ್ತು ಹೋಟೆಲ್‍ಗಳಲ್ಲಿ ಪಾರ್ಸಲ್‍ಗೆ ಮಾತ್ರ ಅವಕಾಶವಿರುತ್ತದೆ. ಕಟ್ಟಡ ನಿರ್ಮಾಣ ಹಾಗೂ ನಿರ್ಮಾಣಕ್ಕೆ ಸಂಬಂಧಿಸಿದ ಮಾರಾಟ ಅಂಗಡಿಗಳಿಗೂ ಅವಕಾಶವಿದೆ. ಎಲ್ಲಾ ಆಹಾರ ಸಂಸ್ಕರಣೆ ಮತ್ತು ಕೈಗಾರಿಕೆಗಳು ಕಾರ್ಯನಿರ್ವಹಿಸಲು ಹಾಗೂ ಇ-ಮಾರುಕಟ್ಟೆ (ಇ-ಕಾಮರ್ಸ್)ಗಳ ಮೂಲಕ ಎಲ್ಲಾ ಅಗತ್ಯ ವಸ್ತುಗಳನ್ನು ತಲುಪಿಸಲು ಅನುಮತಿಸಲಾಗಿದೆ ಎಂದು ಹೇಳಿದರು.
ಬ್ಯಾಂಕ್‍ಗಳು, ವಿಮಾ ಕಚೇರಿಗಳು ಹಾಗೂ ಎಟಿಎಂಗಳು ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ. ಸಗಟು ತರಕಾರಿ, ಹೂವು ಹಾಗೂ ಹಣ್ಣನ್ನು ಮಾರಾಟ ಮಾಡುವವರು ಏಪ್ರಿಲ್ 23ರ ಒಳಗೆ ತೆರೆದ ಪ್ರದೇಶಗಳಿಗೆ ಸ್ಥಳಾಂತರಿಸಿಕೊಳ್ಳತಕ್ಕದ್ದು. ಮದುವೆ ಹಾಗೂ ಶುಭ ಸಮಾರಂಭಗಳನ್ನು ಗರಿಷ್ಠ 50 ಜನಗಳಿಗೆ ಮೀರದಂತೆ ನಡೆಸಲು ಹಾಗೂ ಅಂತ್ಯಕ್ರಿಯೆಗಳಲ್ಲಿ ಗರಿಷ್ಠ 20 ಜನಗಳು ಮಾತ್ರ ಭಾಗವಹಿಸಲು ಅನುಮತಿಸಲಾಗಿದೆ ಎಂದರು.
ಪಡಿತರ ಅಂಗಡಿಗಳು, ಹಾಲು, ಹಣ್ಣು, ತರಕಾರಿ, ಆಹಾರ, ದಿನಸಿ ಅಂಗಡಿಗಳು, ದಿನಬಳಕೆ ವಸ್ತುಗಳ ಅಂಗಡಿಗಳು, ಮಾಂಸ ಮಾರಾಟ ಅಂಗಡಿಗಳಿಗೆ ಅನುಮತಿಯಿದೆ. ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮಿನ ಸೇವೆಗಳನ್ನು ಅನುಮತಿಸಲಾಗಿದೆ. ಎಲ್ಲಾ ಔಷಧಾಲಯಗಳು ಸೇರಿದಂತೆ ಆರೋಗ್ಯ ಸೇವೆಗಳು (ಆಯುಷ್ ಮತ್ತು ಪಶು ವೈದ್ಯಕೀಯ ಸೇರಿದಂತೆ) ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ. ಕ್ಷೌರಿಕ ಅಂಗಡಿ, ಸಲೂನ್‍ಗಳು, ಬ್ಯೂಟಿ ಪಾರ್ಲರ್ಗಳು ಕೋವಿಡ್‍ನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ ಎಂದು ಹೇಳಿದರು.
ಕೋವಿಡ್ ಕೇರ್ ಸೆಂಟರ್ ಪ್ರಾರಂಭಕ್ಕೆ ಕ್ರಮ :
ಕೋವಿಡ್ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಗಳನ್ವಯ ಜಿಲ್ಲೆಯಲ್ಲಿ ಅವಶ್ಯಕತೆಗನುಸಾರವಾಗಿ ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ ಒಳಗೊಂಡಂತೆ 9 ತಾಲೂಕು ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಹಾಸಿಗೆ ಜತೆ ಆಮ್ಲಜನಕದ ಪೂರೈಕೆ ಮಾಡಲಾಗುತ್ತಿದ್ದು, ಈಗಾಗಲೇ ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ಗಾಗಿ ಮೀಸಲಿಟ್ಟಿರುವ 200 ಹಾಸಿಗೆಗಳ ಪೈಕಿ 21 ಹಾಸಿಗೆ ಖಾಲಿಯಿದ್ದು, ಆಮ್ಲಜನಕದ ಕೊರತೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿರುವ 2 ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಸರ್ಕಾರದ ಆದೇಶದಂತೆ ಶೇಕಡಾ 50ರಷ್ಟು ಹಾಸಿಗೆ ಮೀಸಲಿರಿಸಬೇಕೆಂದು ಕಟ್ಟುನಿಟ್ಟಾದ ನಿದೇರ್ಶನ ನೀಡಲಾಗಿದ್ದು, ಕಾಲೇಜುಗಳ ಹಾಸಿಗೆಗಳನ್ನು ಮೀಸಲಿರಿಸಿ ಚಿಕಿತ್ಸೆ ನೀಡುತ್ತಿವೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲೂ ಶೇಕಡಾ 50ರಷ್ಟು ಹಾಸಿಗೆ ಮೀಸಲಿಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ವಾರದಲ್ಲಿ ಒಂದು ದಿನ ಮಾತ್ರ ವ್ಯಾಪಾರ ವಹಿವಾಟು
ಆಮ್ಲಜನಕ, ರೆಮ್‌ಡೆಸಿವಿರ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ನಿಯಂತ್ರಣ ಸಂಬಂಧ ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಸೋಂಕು ದೃಢಪಟ್ಟು ಹೋಂ ಐಸೋಲೇಷನ್ನಲ್ಲಿರಲು ಸಾಧ್ಯವಾಗದ ಸೋಂಕಿತರು ಆಸ್ಪತ್ರೆಗಳಿಗೆ ಅಥವಾ ಕೋವಿಡ್ ಕೇರ್ ಸೆಂಟರ್ಗಳಿಗೆ ದಾಖಲಾಗಬಹುದು ಎಂದರು.