ತುಮಕೂರು: ವಿಮೆ ಹಣ ನೀಡಲು ಲಂಚ ಪಡೆದಿದ್ದ ಕೆಜಿಐಡಿ ಅಧೀಕ್ಷಕ ಪುಟ್ಟರಾಜು ಎಂ. ಎಂಬುವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗೆ 3 ವರ್ಷ ಸಾಧಾರಣ ಸಜೆ ಮತ್ತು 8 ಸಾವಿರ ರೂ. ದಂಡ ವಿಧಿಸಿ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಅಂಜನ್ ಎಂಬುವರು ತಮ್ಮ ತಂದೆ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದ ವೇಳೆ ಮೃತಪಟ್ಟಿದ್ದರು. ತಂದೆಯ ಕೆಜಿಐಡಿ ವಿಮೆ ಹಣ ಪಡೆಯಲು ಅರ್ಜಿಯನ್ನು ಅಂಜನ್ ಸಲ್ಲಿಸಿದ್ದರು. ಆದರೆ, ವಿಮೆ ಹಣ ಮಂಜೂರಾತಿಗಾಗಿ ಕೆ.ಜಿ.ಐ.ಡಿ ಕಚೇರಿ ಅಧೀಕ್ಷಕ ಪುಟ್ಟರಾಜು 6 ಸಾವಿರ ರೂ.ಗಳ ಲಂಚದ ಬೇಡಿಕೆ ಇಟ್ಟಿದ್ದರು. ಈ ಕುರಿತು 2017ರ ಮೇ 12ರಂದು ತುಮಕೂರು ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ದೂರು ನೀಡಿದ ದಿನದಂದೇ ಲಂಚದ ಹಣ ಸ್ವೀಕರಿಸುವಾಗ ಪುಟ್ಟರಾಜು ಎಂ. ಸಿಕ್ಕಿಬಿದ್ದಿದ್ದರು.
ಪೊಲೀಸ್ ಉಪಾಧೀಕ್ಷಕ ಜಿ.ಎನ್.ಮೋಹನ್ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಭ್ರಷ್ಟಾಚಾರ ನಿಗ್ರಹ ದಳದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎನ್.ಬಿ. ಬಸವರಾಜು ವಾದ ಮಂಡಿಸಿದ್ದರು.
ಇದನ್ನೂ ಓದಿ.. ವೈದ್ಯಕೀಯ ಉಪಕರಣ ಖರೀದಿಯಲ್ಲಿ 25 ಕೋಟಿ ಲೂಟಿ: ಸುಧಾಕರ್ ವಿರುದ್ಧ ಆಪ್ ಆರೋಪ