ತುಮಕೂರು: ಇತ್ತೀಚಿಗೆ ನಡೆದ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಅವಕಾಶ ಸಿಗದೇ ಆತ್ಮಹತ್ಯೆಗೆ ಯತ್ನಿಸಿದ್ದ ಕೊರಟಗೆರೆಯ ವಿದ್ಯಾರ್ಥಿನಿ ಗ್ರೀಷ್ಮಾ ಇದೀಗ ಪೂರಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ಕೊರೊನಾ ಹಿನ್ನೆಲೆ ಕೇವಲ ಎರಡು ದಿನಗಳು ಮಾತ್ರ ಅಂದರೆ ಸೆಪ್ಟೆಂಬರ್ 27 ಮತ್ತು 29ರಂದು ನಡೆದಿದ್ದ 2020-21ನೇ ಸಾಲಿನ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ.
ಮೂಡಬಿದಿರೆಯ ಆಳ್ವಾಸ್ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದ ಕೊರಟಗೆರೆಯ ನರಸಿಂಹಮೂರ್ತಿ ಮತ್ತು ಪದ್ಮಾವತಿ ದಂಪತಿಯ ಮಗಳು ಗ್ರೀಷ್ಮಾ 625ಕ್ಕೆ 599 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.
9 ನೇ ತರಗತಿಯ ಬಾಕಿ ಶುಲ್ಕ ಪಾವತಿಸದಿದ್ದಕ್ಕೆ 10ನೇ ತರಗತಿ ಪ್ರವೇಶಕ್ಕೆ ಅವಕಾಶ ನಿರಾಕರಣೆ
ಮೂಡಬಿದಿರೆಯ ಆಳ್ವಾಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಗ್ರೀಷ್ಮಾ 9ನೇ ತರಗತಿಯಲ್ಲಿ ಶೇ.96ರಷ್ಟು ಅಂಕ ಪಡೆದಿದ್ದರು. ಬಳಿಕ ಲಾಕ್ಡೌನ್ ಹಿನ್ನೆಲೆ ಮನೆಗೆ ವಾಪಸ್ ಆಗಿದ್ದರು. 9 ನೇ ತರಗತಿಯಲ್ಲಿ ಬಾಕಿಯಿದ್ದ ಶುಲ್ಕ ಪಾವತಿಸದಿದ್ದಕ್ಕೆ 10ನೇ ತರಗತಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿರಲಿಲ್ಲ.
ಬಾಲಕಿಗೆ ಧೈರ್ಯ ತುಂಬಿದ್ದ ಮಾಜಿ ಶಿಕ್ಷಣ ಸಚಿವರು
ಪಾಲಕರು ಎಸ್ಎಸ್ಎಲ್ಸಿ ಪರೀಕ್ಷೆ ನೋಂದಣಿ ಬಗ್ಗೆ ಸಂಸ್ಥೆಯಲ್ಲಿ ವಿಚಾರಿಸಿದಾಗ ಈ ಬಗ್ಗೆ ವಿಷಯ ಬೆಳಕಿಗೆ ಬಂದಿತ್ತು. ಇದರಿಂದ ನೊಂದ ವಿದ್ಯಾರ್ಥಿನಿ ಮಕ್ಕಳ ಹಕ್ಕುಗಳ ಆಯೋಗ ಡಿಡಿಪಿಐ ಶಿಕ್ಷಣ ಸಚಿವರಿಗೆ ಇ - ಮೇಲ್ ಕಳುಹಿಸಿದರು. ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದಾಗಿ ಆಕೆ ಜುಲೈ 17ರಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ವಿಷಯ ತಿಳಿದ ಕೂಡಲೇ ಅಂದಿನ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಅವರು ಬಾಲಕಿಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ರು.
ಪೂರಕ ಪರೀಕ್ಷೆಗೆ ಅವಕಾಶ ಕಲ್ಪಿಸಿದ್ದ ಆಗಿನ ಸಚಿವರು
ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಗೆ ಆಕೆ ಇರಲಿಲ್ಲವಾದ್ದರಿಂದ, ಪೂರಕ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗಿತ್ತು. ಆಗಿನ ಶಿಕ್ಷಣ ಸಚಿವರು, ಯಾವುದೇ ಕಾರಣಕ್ಕೂ ಮನಸ್ಸಿಗೆ ಬೇಸರ ಮಾಡಿಕೊಳ್ಳದೇ ಉತ್ತಮ ಅಂಕಗಳನ್ನು ಪಡೆಯುವೆ, ಅಭ್ಯಾಸದ ಕಡೆ ಗಮನಹರಿಸುವಂತೆ ವಿದ್ಯಾರ್ಥಿನಿಗೆ ಧೈರ್ಯ ತುಂಬಿದ್ದರು.
ಅಲ್ಲದೇ, ಕಳೆದ ಸೆಪ್ಟೆಂಬರ್ 27 ಮತ್ತು 29ರಂದು ನಡೆದ ಪೂರಕ ಪರೀಕ್ಷೆಗೆ ಗ್ರೀಷ್ಮಾ ಹಾಜರಾಗಿದ್ದು, 625 ಕ್ಕೆ 599 ಅಂಕ ಪಡೆಯುವ ಮೂಲಕ ಟಾಪರ್ ಆಗಿದ್ದಾರೆ.