ತುಮಕೂರು: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿವೋರ್ವ ತನ್ನ ಸಹೋದರನ ಹೊಟ್ಟೆ ಬಗೆದು ಕರುಳು ಕಿತ್ತು ಭೀಕರವಾಗಿ ಕೊಲೆ ಮಾಡಿರುವ ಪ್ರಕರಣ ಇಲ್ಲಿನ ಸರಸ್ವತಿಪುರಂ ಬಡಾವಣೆಯಲ್ಲಿ ನಡೆದಿದೆ.
ಕಿರಣ್ (11) ಮೃತ ಬಾಲಕ. ನಿನ್ನೆ ರಾತ್ರಿ ಏಕಾಏಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಹಾಕಿಕೊಂಡು ಕಿಶೋರ್ ತನ್ನ ಸ್ವಂತ ಸಹೋದರ ಕಿರಣ್ಗೆ ಚೂರಿಯಿಂದ ಇರಿದು ಹತ್ಯೆಗೈದಿದ್ದಾನೆ. ಕಿಶೋರ್ ದ್ವಿತೀಯ ಪಿಯುಸಿ ಹಾಗೂ ಕಿರಣ್ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಆದರೆ, ಕಿಶೋರ್ ಸರಿಯಾಗಿ ಕಾಲೇಜಿಗೆ ಹೋಗದೇ, ಪುಂಡ ಪೋಕರಿಯಂತೆ ವರ್ತಿಸುತ್ತಿದ್ದ. ತಾಯಿ ರತ್ನ ಕೂಡ ಸಾಕಷ್ಟು ಬುದ್ಧಿವಾದ ಹೇಳಿದರೂ, ಇದಕ್ಕೆ ಕಿಶೋರ್ ಕ್ಯಾರೆ ಎನ್ನುತ್ತಿರಲಿಲ್ಲ. ನಿನ್ನೆ ರಾತ್ರಿ ಸುಮಾರು 8 ಗಂಟೆ ಸಂದರ್ಭದಲ್ಲಿ ರತ್ನ ವಾಕಿಂಗ್ಗೆಂದು ಹೊರಹೋದ ತಕ್ಷಣ ಮನೆಯೊಳಗಿದ್ದ ಕಿಶೋರ್ ಬಾಗಿಲು ಹಾಕಿಕೊಂಡು, ನೀರಿನ ಮೋಟಾರ್ ಆನ್ ಮಾಡಿದ್ದಾನೆ. ಈ ಬಗ್ಗೆ ಹೆಚ್ಚು ಗಮನಹರಿಸದ ರತ್ನ ವಾಕಿಂಗ್ ತೆರಳಿದ್ದರು. ಸುಮಾರು 100 ಮೀಟರ್ ಸಾಗುತ್ತಿದ್ದಂತೆ ಮನೆಯಲ್ಲಿ ಯಾರೋ ಕಿರುಚುವುದು ಕೇಳಿಸಿದೆ. ಏನಾಯಿತೆಂದು ವಾಪಸ್ ಓಡಿ ಬಂದು ಕಿಟಕಿಯಲ್ಲಿ ನೋಡಿದಾಗ ಕಿಶೋರ್, ಕಿರಣ್ಗೆ ಚೂರಿಯಿಂದ ಚುಚ್ಚಿ, ಹೊಟ್ಟೆಯಿಂದ ಕರುಳನ್ನು ಬಗೆದು ಹೊರಗೆ ಎಳೆದಿದ್ದಾನೆ. ಇದನ್ನ ಕಂಡ ರತ್ನ ಜೋರಾಗಿ ಕಿರುಚಿದ್ದಾರೆ.
ಸುಮಾರು ಅರ್ಧಗಂಟೆಯ ನಂತರ ಬಾಗಿಲು ತೆಗೆದ ಕಿಶೋರ್, ನಾನು ಕಿರಣ್ನನ್ನ ಸಾಯಿಸಿಬಿಟ್ಟೆ ಎಂದಿದ್ದಾನೆ. ಇದರಿಂದ ಗಾಬರಿಗೊಂಡ ತಾಯಿ ರತ್ನ, ಅಕ್ಕಪಕ್ಕದ ಮನೆಯವರಿಗೆ ಪೊಲೀಸರನ್ನು ಕರೆಸಲು ಮನವಿ ಮಾಡಿದರು. ಸ್ಥಳಕ್ಕೆ ಬಂದ ಜಯನಗರ ಪೊಲೀಸರು ಆರೋಪಿ ಕಿಶೋರನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.