ತುಮಕೂರು: ಪ್ರಸ್ತುತ ಸೋಂಕಿತರು ಸೇರಿದಂತೆ ಪ್ರತಿಯೊಬ್ಬರು ಆರೋಗ್ಯದ ಕಡೆ ಹೆಚ್ಚು ಗಮನ ಕೇಂದ್ರೀಕರಿಸುತ್ತಿದ್ದಾರೆ. ಆಯುರ್ವೇದ, ಯುನಾನಿ ಸೇರಿದಂತೆ ಸಾವಯವ ಪದಾರ್ಥಗಳನ್ನು ಬಳಕೆ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಪೂರಕವಾಗಿ ಸಾವಯವ ಕೃಷಿಯಲ್ಲಿ ಹೆಚ್ಚುತೊಡಗಿಸಿಕೊಂಡಿರೋ ನಗರದ ದಂಪತಿ ವಿಶೇಷವಾದ ಕಷಾಯವೊಂದನ್ನು ತಯಾರಿಸಿ ನಿತ್ಯ ಸೋಂಕಿತರು ಮತ್ತು ಕೋವಿಡ್ ವಾರಿಯರ್ಸ್ ಗಳಿಗೆ ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ.
ಕೊರೊನಾ ನಿಯಂತ್ರಣದ ಸದುದ್ದೇಶ ಹೊಂದಿ ಜನರಿಗೆ ಕಷಾಯ ನೀಡುತ್ತಿರುವ ದಂಪತಿಗಳ ಹೆಸರು ನಂಜಪ್ಪ ಮತ್ತು ಶಾಂತಕುಮಾರಿ ಎಂಬುದು ತಿಳಿದು ಬಂದಿದೆ. ಇವರು ನಗರದ ಹೊರವಲಯದಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಕೊರೊನಾ 2ನೇ ಅಲೆ ಆರಂಭವಾಗುತ್ತಿದ್ದಂತೆ ನಿತ್ಯ ಸಾವಯವ ಪದ್ದತಿಯ ಔಷಧೀಯ ಗಿಡಗಳನ್ನು ಬಳಸಿ ಮನೆಯಲ್ಲಿಯೇ ಔಷಧ ತಯಾರಿಸಿ ಸೋಂಕಿತರಿಗೆ ನೀಡುವ ಪ್ರಯತ್ನಕ್ಕೆ ಮುಂದಾಗಿದ್ದರು. ಹೀಗೆ ಪ್ರತಿ ಕೋವಿಡ್ ಆರೈಕೆ ಕೇಂದ್ರಗಳಿಗೆ ತೆರಳಿ ಸೋಂಕಿತರಿಗೆ ಕಷಾಯಗಳನ್ನು ಕೊಡುವ ಮೂಲಕ ಅವರ ಆರೋಗ್ಯ ವೃದ್ಧಿಗೆ ಸಹಕಾರಿಯಾಗುತ್ತಿದ್ದಾರೆ.
ಕಳೆದ 2 ವರ್ಷಗಳಿಂದ ತಮ್ಮ ತೋಟದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸುತ್ತಿರುವ ಇವರು, ಕುಟುಂಬದಲ್ಲಿ ಮೊದಲಿಗೆ ಔಷಧ ಸಸ್ಯಗಳನ್ನು ಬಳಸಿ ತಯಾರಿಸುತ್ತಿದ್ದ ಕಷಾಯಗಳನ್ನು ಸೇವಿಸಲು ಆರಂಭಿಸಿದ್ದಾರೆ. ಇದನ್ನು ಸೇವಿಸಿದ ನಂತರ ಕುಟುಂಬದ ಸದಸ್ಯರು ನೆಗಡಿ, ಕೆಮ್ಮು, ಆಯಾಸ ಸೇರಿದಂತೆ ಅನೇಕ ರೀತಿಯ ಬಳಲುವಿಕೆಯಿಂದ ಗುಣಮುಖರಾಗಿದ್ದಾರೆ. ಇದರಿಂದ ಸಂತಸಗೊಂಡ ಸದಸ್ಯರು ಚಿಕಿತ್ಸೆಗೆಂದು ಆಸ್ಪತ್ರೆ ಕಡೆ ಮುಖವನ್ನೇ ಮಾಡಿಲ್ಲ. ಇದರಿಂದ ಸ್ವಯಂ ಪ್ರೇರಣೆಗೊಂಡು ನಮ್ಮಂತೆಯೇ ಕೊರೊನಾ ಸೋಂಕಿತರು ಆರೋಗ್ಯವಾಗಿರಬೇಕೆಂಬ ಹಂಬಲದಿಂದ ನಿತ್ಯ ಕಷಾಯ ತಯಾರಿಸಿ ವಿತರಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಅಲ್ಲದೇ ಕೊರೊನಾ ವಾರಿಯರರ್ಸ್ಗಳಾದ ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರಿಗೆ ಕಷಾಯ ನೀಡುತ್ತಿದ್ದಾರೆ. ಇದರಿಂದ ಜನರಿಗೆ ಆರೋಗ್ಯ ವೃದ್ಧಿಯಾಗುತ್ತಿದೆ. ಔಷಧೀಯ ಸಸ್ಯಗಳೊಂದಿಗೆ ಅಶ್ವಗಂಧ, ಜೀರಿಗೆ, ಮೆಣಸು, ಶುಂಠಿ ಸೇರಿದಂತೆ ಇನ್ನಿತರ ಔಷಧೀಯ ವಸ್ತುಗಳನ್ನು ಬಳಸಿ ನಿತ್ಯ ಕಷಾಯ ತಯಾರಿಸಲಾಗುತ್ತಿದೆ. ತೋಟದಲ್ಲಿಯೇ ಇದನ್ನು ತಯಾರಿಸಿ ತುಮಕೂರು ನಗರಕ್ಕೆ ತಂದು ಉಚಿತವಾಗಿ ವಿತರಣೆ ಮಾಡಿ ಸೋಂಕಿನ ವಿರುದ್ಧ ಸಮರ ಸಾರಿದ್ದಾರೆ.
ಓದಿ: ಜಾರಕಿಹೊಳಿ ಸಿಡಿ ಕೇಸ್ : ನ್ಯಾಯಸಮ್ಮತ ತನಿಖೆಯಾಗಬೇಕು ಎಂದ ಹೈಕೋರ್ಟ್