ತುಮಕೂರು : ರಾಜ್ಯದಲ್ಲಿ ಅನ್ಲಾಕ್ ಜಾರಿಯಾದ ಬಳಿಕ ಆರು ತಿಂಗಳಿನಿಂದ ನಿಂತಿದ್ದ ಸರ್ಕಾರಿ ಬಸ್ಗಳು ರಸ್ತೆಗಿಳಿದಿದೆ. ಆದರೆ, ಶೇ.30ರಷ್ಟು ಪ್ರಯಾಣಿಕರು ಮಾತ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಓಡಾಡುತ್ತಿದ್ದಾರೆ. ಇದರಿಂದಾಗಿ ಕೇವಲ ಡೀಸೆಲ್ ಖರ್ಚಿಗೆ ಮಾತ್ರ ಹಣ ಸಾಲುತ್ತಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಈ ಮೊದಲು ಒಂದು ದಿನಕ್ಕೆ ಎರಡು ಕೋಟಿಯಷ್ಟು ಜನರು ಸರ್ಕಾರಿ ಬಸ್ಸಿನಲ್ಲಿ ಸಂಚರಿಸುತ್ತಿದ್ದರು. ಆದರೆ, ಈಗ ಕೇವಲ ಶೇ.30ರಷ್ಟು ಜನ ಮಾತ್ರ ಪ್ರಯಾಣ ಬೆಳೆಸುತ್ತಿದ್ದಾರೆ. ಆದರೂ ಕೂಡ ನಿಗಮದ ಯಾವುದೇ ಕಾರ್ಮಿಕರಿಗೂ ನಾವು ಸಂಬಳ ತಡೆ ಹಿಡಿದಿಲ್ಲ.
ರಾಜ್ಯ ಸರ್ಕಾರದಿಂದ ಹಣವನ್ನು ಪಡೆದು 1,30,000 ಸಿಬ್ಬಂದಿಗೆ ವೇತನ ನೀಡಲಾಗಿದೆ. ಕೊರೊನಾ ಭೀತಿಯಿಂದ ಕೆಲಸಕ್ಕೆ ಬರಲು ಹಿಂದೇಟು ಹಾಕುವ ಸಿಬ್ಬಂದಿಗೆ ಮಾತ್ರ ರಜೆ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಕಾಂಗ್ರೆಸ್ನಲ್ಲಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ, ಸಿದ್ದರಾಮಯ್ಯನವರದ್ದು ಒಂದು ಬಾಗಿಲು, ಡಿಕೆ ಶಿವಕುಮಾರ್ ಅವರದ್ದು ಮತ್ತೊಂದು ಹಾಗೂ ಖರ್ಗೆಯವರದ್ದು ಮಗದೊಂದು ಬಾಗಿಲು ಎಂಬಂತಾಗಿದೆ ಎಂದು ಲೇವಡಿ ಮಾಡಿದರು.
ಇನ್ನು, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಯಾವುದೇ ಬಂಡಾಯ ಅಭ್ಯರ್ಥಿಗಳು ಇದ್ದರೂ ಸಹ ನಾವು ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ. ಬಿಜೆಪಿ ಬಂಡಾಯ ಅಭ್ಯರ್ಥಿಗಳ ವಿರುದ್ಧ ಪಕ್ಷವು ಶಿಸ್ತಿನ ಕ್ರಮ ಕೈಗೊಳ್ಳಲಿದೆ ಎಂದು ಇದೇ ವೇಳೆ ತಿಳಿಸಿದರು.