ತುಮಕೂರು: 21ನೇ ಶತಮಾನದ ಸಿನಿಮಾರಂಗ ಅರ್ಥಹೀನ ಹಾಗೂ ಸಂಸ್ಕೃತಿ ಹೀನವಾಗಿದ್ದು, ಇದರಿಂದ ಸಮಾಜ ಹಾಗೂ ಕುಟುಂಬಕ್ಕೆ ಏನು ಕೊಡುಗೆ ಇಲ್ಲವೆಂದು ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ವಿಷಾದ ವ್ಯಕ್ತಪಡಿಸಿದ್ದಾರೆ.
ನಗರದ ರವೀಂದ್ರ ಕಲಾನಿಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನ ಜಿಲ್ಲಾ ಘಟಕ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಜನಾರ್ದನ್, ತಾವು ಇದುವರೆಗೂ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಚಿತ್ರರಂಗದಲ್ಲಿನ ತಮ್ಮ ಅಳಿಲು ಸೇವೆಯನ್ನು ಗುರುತಿಸಿ ಅಭಿನಂದನೆ ಸಲ್ಲಿಸುತ್ತಿರುವುದು ಸಂತಸ ತಂದಿದೆ. ಈ ಕಾರ್ಯಕ್ರಮ ನನಗೆ 70ವರ್ಷ ತುಂಬಿರುವುದನ್ನು ನೆನಪಿಸುತ್ತಿದೆ ಎಂದರು.
ಇನ್ನು 70ರ ದಶಕದ ಹಿಂದಿನ ಸಿನಿಮಾಗಳು ಸಮಾಜಕ್ಕೆ, ಕುಟುಂಬಕ್ಕೆ ಏನು ಬೇಕೋ ಅದನ್ನು ಕೊಡುತ್ತಿದ್ದವು. ಅಂದಿನ ಸಿನಿಮಾ ರೂಪುರೇಷೆ 20ನೇ ಶತಮಾನಕ್ಕೆ ಸೀಮಿತವಾಗಿದ್ದು, ಈಗಿಗ ಸಿನಿಮಾಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿಲ್ಲ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ನಟ ಸುರೇಶ್, ಕಲಾತಪಸ್ವಿ ಡಾ. ರಾಜೇಶ್, ವಿಶ್ವ ಮಾನವ ಸಾಂಸ್ಕೃತಿಕ ಪ್ರತಿಷ್ಠಾನದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.