ತುಮಕೂರು: ರಾಜ್ಯಾದ್ಯಂತ ಕೆಎಸ್ಆರ್ಟಿಸಿ ನೌಕರರ ಮುಷ್ಕರ ಮುಂದುವರೆದಿದ್ದು, ಇದರಿಂದಾಗಿ ಕಳೆದ 2 ದಿನಗಳಿಂದ ಜಿಲ್ಲೆಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ತುಮಕೂರು ಘಟಕಕ್ಕೆ 1.20 ಕೋಟಿ ರೂ. ನಷ್ಟ ಸಂಭವಿಸಿದೆ.
ಮುಷ್ಕರ ಮುನ್ನ ಪ್ರತಿನಿತ್ಯ ಜಿಲ್ಲೆಯಲ್ಲಿ ವಿವಿಧ ಮಾರ್ಗಗಳಲ್ಲಿ 580 ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸುತ್ತಿದ್ದವು. ಇದರಿಂದ ತುಮಕೂರು ಕೆಎಸ್ಆರ್ಟಿಸಿ ಘಟಕಕ್ಕೆ ಪ್ರತಿದಿನ 60 ಲಕ್ಷ ರೂ. ಸಂಗ್ರಹವಾಗುತ್ತಿತ್ತು. ಆದರೆ ಈಗ ಕೇವಲ ಬೆರಳೆಣಿಕೆಯಷ್ಟು ಬಸ್ಗಳು ಮಾತ್ರ ಪೊಲೀಸ್ ಭದ್ರತೆಯೊಂದಿಗೆ ಸಂಚರಿಸುತ್ತಿದ್ದು, ಇದರಿಂದಾಗಿ ತುಮಕೂರು ಕೆಎಸ್ಆರ್ಟಿಸಿ ಘಟಕಕ್ಕೆ ಕನಿಷ್ಠ ಆದಾಯ ಸಂದಾಯವಾಗುತ್ತಿದೆ.
ತುಮಕೂರು ಜಿಲ್ಲೆಯಲ್ಲಿ ಸಾಮಾನ್ಯವಾಗಿ ಬಹುತೇಕ ಗ್ರಾಮೀಣ ಪ್ರದೇಶಗಳಿಗೆ ಖಾಸಗಿ ಬಸ್ ಸಂಚಾರ ವ್ಯವಸ್ಥೆಯಿದ್ದು, ಇನ್ನುಳಿದಂತೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಓಡಾಡುತ್ತಿದ್ದ ಸಾರ್ವಜನಿಕರು ಕೂಡ ಖಾಸಗಿ ಬಸ್ಗಳ ಮೊರೆ ಹೋಗುತ್ತಿದ್ದಾರೆ. ಹೊರ ಜಿಲ್ಲೆಗಳಿಗೆ ಪ್ರಯಾಣ ಮಾಡುವವರು ಕೂಡ ಪ್ರಯಾಣವನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಿದ್ದಾರೆ.
ಮುಷ್ಕರದ 2ನೇ ದಿನ ಕೇವಲ 20 ಕೆಎಸ್ಆರ್ಟಿಸಿ ಬಸ್ಗಳು ಮಾತ್ರ ಸಂಚರಿಸಿವೆ. ತುರುವೇಕೆರೆ ತಾಲೂಕು ವ್ಯಾಪ್ತಿಯಲ್ಲಿ 4, ತುಮಕೂರು ತಾಲೂಕು ವ್ಯಾಪ್ತಿಯಲ್ಲಿ 7, ಕುಣಿಗಲ್ ಮತ್ತು ಮಧುಗಿರಿ ತಾಲೂಕು ವ್ಯಾಪ್ತಿಯಲ್ಲಿ ತಲಾ 3 ಹಾಗೂ ಶಿರಾದಿಂದ ಕೇವಲ ಒಂದು ಕೆಎಸ್ಆಟ್ಟಿಸಿ ಬಸ್ ಮಾತ್ರ ಸಂಚರಿಸಿವೆ ಎಂದು ತುಮಕೂರು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ್ ಮಾಹಿತಿ ನೀಡಿದ್ದಾರೆ.