ತುಮಕೂರು: ಭಾರತ ಸರ್ಕಾರದ ಪ್ರಕಾರ ಕೃಷಿ ಭೂಮಿಯಲ್ಲಿ 0.75 ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಇರಬೇಕು. ಆದರೆ ತುಮಕೂರಿನ ಕೃಷಿ ಮಣ್ಣಿನಲ್ಲಿ ಕೇವಲ 0.3 ಇದೆ. ಹೀಗಿರುವಾಗ ಭೂಮಿಯಲ್ಲಿ ನೀರಿನ ಪ್ರಮಾಣವನ್ನು ಹೆಚ್ಚು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸಸ್ಯ ವೈದ್ಯ ಹೆಚ್.ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಗಾರ್ಡನ್ ರಸ್ತೆಯಲ್ಲಿರುವ ವಿಜ್ಞಾನ ಭವನದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ತುಮಕೂರು ವಿಜ್ಞಾನ ಕೇಂದ್ರ, ಸಹಜ ಬೇಸಾಯ ಶಾಲೆಯಿಂದ ತುಮಕೂರು ಜಿಲ್ಲೆಯ ಜಲ ಬಿಕ್ಕಟ್ಟಿನ ಪರಿಹಾರಕ್ಕಾಗಿ ಜಿಲ್ಲಾ ಜಲಾಸಕ್ತರ ಜಲದ ಜಾಡು ಸಮಾವೇಶದಲ್ಲಿ ಅವರು ಮಾತನಾಡಿದರು.
ಮಣ್ಣು ಯಾವ ಬೆಳೆಗೆ ಹೊಂದುತ್ತದೆ ಎಂಬುದನ್ನು ಬೆಳೆ ಬೆಳೆಯುವ ಮೊದಲು ಪರಾಮರ್ಶೆ ಮಾಡಬೇಕು. ಆ ಮೂಲಕ ನೀರಿನ ಲಭ್ಯತೆಗೆ ತಕ್ಕಂತೆ ಕೃಷಿ ಮಾಡಬೇಕು. ಮಣ್ಣಿನಲ್ಲಿ 0.75 ಕಾರ್ಬನ್ ಡೈ ಆಕ್ಸೈಡ್ ಇರಬೇಕು. ಆದರೆ ತುಮಕೂರಿನ ಕೃಷಿ ಭೂಮಿಯಲ್ಲಿ 0.3 ಇದೆ. ಹೀಗಿರುವಾಗ ಭೂಮಿಯಿಂದ ರೈತರು ಕೃಷಿಯಲ್ಲಿ ಏನು ನಿರೀಕ್ಷಿಸಲು ಸಾಧ್ಯ? ವಿಶ್ವವಿದ್ಯಾನಿಲಯಗಳು ನೀರಿನ ಬಗ್ಗೆ, ಮಣ್ಣಿನ ಬಗ್ಗೆ ಪರೀಕ್ಷೆಗಳನ್ನು ನಡೆಸುತ್ತೇವೆ. ಆದರೆ ಕಾರ್ಬನ್ ಪ್ರಮಾಣದ ಬಗ್ಗೆ ಏಕೆ ಚರ್ಚೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ನಂತರ ಮಾತನಾಡಿದ ನಿವೃತ್ತ ಅರಣ್ಯ ವಲಯಾಧಿಕಾರಿ ನಾಗೇಂದ್ರರಾವ್, ಬೆಟ್ಟ-ಗುಡ್ಡ ಸಾಲಿನಲ್ಲಿ ಮಳೆ ನೀರು ಇಂಗುವಂತೆ ಮಾಡಬೇಕು. ಆಗ ಬೆಟ್ಟದ ಮೇಲಿನ ತೇವಾಂಶದ ಗುಣಮಟ್ಟ ಹೆಚ್ಚಾಗಿ ಹಸಿರು ಉತ್ಪತ್ತಿಯಾಗುತ್ತದೆ. ನೀರಿಗಾಗಿ ಅರಣ್ಯ ಎಂಬ ಯೋಜನೆಯನ್ನು ಇಟ್ಟುಕೊಂಡು ಅರಣ್ಯವನ್ನು ಸಂರಕ್ಷಿಸಬೇಕಿದೆ. ಅರಣ್ಯ ಇಲ್ಲದೆ ಮನುಷ್ಯ ಬದುಕಿರಲು ಸಾಧ್ಯವಿಲ್ಲ ಎಂದರು.