ಬೆಂಗಳೂರು: ಬೆಂಗಳೂರಿನ 209 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸ್ಥಳಗಳನ್ನು ಗುರುತಿಸಲಾಗಿದ್ದು, (58 ಅತಿ ಸೂಕ್ಷ್ಮ, 151 ಸೂಕ್ಷ್ಮ ಪ್ರದೇಶ) ಈ ಪ್ರದೇಶಗಳಲ್ಲಿ ಪ್ರವಾಹ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ರೂಪಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಭೆ ನಡೆಸಿ, ಬೆಂಗಳೂರು ನಗರದಲ್ಲಿ ಮಳೆ ವಿಕೋಪ ತಡೆಯಲು ಕೈಗೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.
8 ವಲಯಗಳಲ್ಲಿ ಶಾಶ್ವತ ನಿಯಂತ್ರಣ ಕೊಠಡಿಗಳಿದ್ದು, 63 ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ದಿನದ 24 ಗಂಟೆಯೂ ಈ ನಿಯಂತ್ರಣಕೊಠಡಿಗಳು ಕಾರ್ಯನಿರ್ವಹಿಸಲಿದ್ದು, ರಕ್ಷಣೆ, ಪರಿಹಾರ ಕಾರ್ಯಾಚರಣೆಗೆ ಅಗತ್ಯ ಸಲಕರಣೆಗಳನ್ನು ಸಂಗ್ರಹಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಸಿಎಂಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಅಧಿಕಾರಿಗಳಿಂದ ಮಾಹಿತಿ ಆಲಿಸಿದ ಸಿಎಂ, 209 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸ್ಥಳಗಳನ್ನು ಗುರುತಿಸಲಾಗಿದ್ದು, (58 ಅತಿ ಸೂಕ್ಷ್ಮ, 151 ಸೂಕ್ಷ್ಮ ಪ್ರದೇಶ) ಈ ಪ್ರದೇಶಗಳಲ್ಲಿ ಪ್ರವಾಹ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ರೂಪಿಸುವಂತೆ ನಿರ್ದೇಶನ ನೀಡಿದರು.
ಬೆಂಗಳೂರು ನಗರದಲ್ಲಿ ತಡೆಗೋಡೆ ಇರುವ 440 ಕಿ.ಮೀ. ಉದ್ದದ ರಾಜಕಾಲುವೆ ಪ್ರದೇಶಗಳ ವಾರ್ಷಿಕ ನಿರ್ವಹಣೆಗೆ ಕ್ರಮ ವಹಿಸಲಾಗಿದೆ. ನಗರದ ಕೆರೆಗಳನ್ನು ದೈನಂದಿನ ಆಧಾರದಲ್ಲಿ ನಿರ್ವಹಿಸಲಾಗುತ್ತಿದ್ದು, ಮಳೆನೀರು ರಾಜಕಾಲುವೆಗಳ ಮೂಲಕ ಕೆರೆಗಳಿಗೆ ಹರಿಯುವಂತೆ ಮಾಡುವುದರಿಂದ ಪ್ರವಾಹ ತಪ್ಪಿಸಬಹುದು ಎಂದು ಸಲಹೆ ನೀಡಿದರು.