ಬೆಂಗಳೂರು: ಮಾಗಡಿ ತಾಲೂಕು ಕುದೂರಿನ ನಂದೀಶ್ವರ ಮಠದ ರಂಗನಾಥನಂದ ಸ್ವಾಮೀಜಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಬೆಳಗ್ಗೆ ಭೇಟಿ ಮಾಡಿ, ಮಾತುಕತೆ ನಡೆಸಿದರು.
ಡಿ.ಕೆ.ಶಿ ನಿವಾಸ, ಕಚೇರಿ, ಆಪ್ತರ ನಿವಾಸಗಳ ಮೇಲೆ 3 ದಿನಗಳ ಹಿಂದೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ, ದಾಖಲೆ ಹಾಗೂ ನಗದು ವಶಪಡಿಸಿಕೊಂಡು ತೆರಳಿದ್ದು, ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಉಪ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಈ ದಾಳಿ ನಡೆದಿರುವುದರಿಂದ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಕೈವಾಡವಿದೆ ಎಂದು ಕೆಲವರು ದೂರಿದ್ದಾರೆ.
2017 ರಿಂದ ನಿರಂತರವಾಗಿ ಪ್ರತಿ ವರ್ಷ ಒಂದಲ್ಲಾ ಒಂದು ರಾಷ್ಟ್ರೀಯ ತನಿಖಾ ಸಂಸ್ಥೆ, ಡಿಕೆಶಿ ನಿವಾಸದ ಮೇಲೆ ದಾಳಿ ನಡೆಸುತ್ತಲೇ ಇದೆ. ಪ್ರಮುಖ ಹಾಗೂ ಪ್ರಬಲ ಒಕ್ಕಲಿಗ ನಾಯಕರಾಗಿ ಹೊರಹೊಮ್ಮುತ್ತಿರುವ ಶಿವಕುಮಾರ್ ಅವರನ್ನು ರಾಜಕೀಯವಾಗಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಸಮುದಾಯದ ಹಲವರು ಆರೋಪಿಸುತ್ತಿದ್ದಾರೆ.
ದಾಳಿ ನಡೆದು ಅಧಿಕಾರಿಗಳು ಒಂದಿಷ್ಟು ದಾಖಲೆಗಳೊಂದಿಗೆ ತೆರಳಿದ ನಂತರ ನಿರಂತರವಾಗಿ ವಿವಿಧ ಪಕ್ಷಗಳ ಮುಖಂಡರು ಹಾಗೂ ವಿವಿಧ ಮಠ ಮಾನ್ಯಗಳ ಸ್ವಾಮೀಜಿಗಳು ಡಿಕೆಶಿ ಭೇಟಿ ಮಾಡಿ ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ದಾರೆ. ಈಗಾಗಲೇ ಪ್ರಮುಖ ಒಕ್ಕಲಿಗ ಮಠಗಳಾದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳು, ತುಮಕೂರಿನ ಶಿರಾ ಸಮೀಪದ ಪಟ್ಟದ ನಾಯಕನಹಳ್ಳಿಯ ಸ್ಫಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿಗಳು, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಅವರು ಈಗಾಗಲೇ ಭೇಟಿ ಕೊಟ್ಟು ಶಿವಕುಮಾರ್ ಗೆ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ.
ಇಂದು ಮಾಗಡಿ ತಾಲೂಕು ಕುದೂರಿನ ನಂದೀಶ್ವರ ಮಠದ ರಂಗನಾಥನಂದ ಸ್ವಾಮೀಜಿ ಕೂಡ ಭೇಟಿ ಕೊಟ್ಟು ಡಿಕೆಶಿ ಜೊತೆ ಸಮಾಲೋಚಿಸಿ ತೆರಳಿದ್ದಾರೆ.