ದಾವಣಗೆರೆ: ಇಷ್ಟು ದಿನ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಜಾಗೃತಿ ಮೂಡಿಸಿದ್ದರೂ ಜನ್ರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮಾತ್ರ ಮುಂದೆ ಬಂದಿದ್ದಿಲ್ಲ. ಆದರೆ ಇದೀಗ ದಾವಣಗೆರೆಯಲ್ಲಿ ಕೊರೊನಾ ಹೆಚ್ಚಾಗುತ್ತಿದ್ದಂತೆ ಜನರಿಗೆ ಕೊರೊನಾ ವ್ಯಾಕ್ಸಿನ್ ಲಸಿಕೆ ನೆನಪಾಗಿದೆ.
ಬೆಣ್ಣೆನಗರಿ ದಾವಣಗೆರೆಯಲ್ಲಿ ಕೊರೊನಾ ವ್ಯಾಕ್ಸಿನ್ ಲಸಿಕೆ ಖಾಲಿಯಾಗಿದೆ ಎಂಬ ಫಲಕವನ್ನು ಅಂಟಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆ ಸೇರಿದಂತೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಖಾಲಿಯಾಗಿದ್ದು, ವ್ಯಾಕ್ಸಿನ್ ಲಸಿಕೆ ಹಾಕಿಸಿಕೊಳ್ಳಲು ಆಗಮಿಸಿದ ಜನರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ತೆರಳುತ್ತಿದ್ದಾರೆ.
ಲಸಿಕೆ ಯಾವಾಗ ಸಿಗುತ್ತದೆ ಎಂದು ಜನರು ಪ್ರಶ್ನೆ ಮಾಡಿದ್ರೆ ಆಸ್ಪತ್ರೆ ಸಿಬ್ಬಂದಿ ಉತ್ತರಿಸದೇ ಮೌನಕ್ಕೆ ಶರಣಾಗಿದ್ದಾರೆ. ಹಿರಿಯ ನಾಗರಿಕರಿಗೆ ಸರಿಯಾದ ಮಾಹಿತಿ ನೀಡದೇ ಇರುವ ಹಿನ್ನೆಲೆ ಆಸ್ಪತ್ರೆ ಸಿಬ್ಬಂದಿ ನಡೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.