ಬೆಂಗಳೂರು : ಮೈಸೂರು ನಗರ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರನ್ನು ನೇಮಕ ಮಾಡುವುದಕ್ಕಾಗಿ ಬಿ.ಶರತ್ ಅವರನ್ನು ದಿಡೀರ್ ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ) ಅಕ್ಟೋಬರ್ 23ಕ್ಕೆ ಮುಂದೂಡಿದೆ.
ವರ್ಗಾವಣೆ ಪ್ರಶ್ನಿಸಿ ಹಿಂದಿನ ಜಿಲ್ಲಾಧಿಕಾರಿ ಬಿ. ಶರತ್ ಸಲ್ಲಿಸಿದ್ದ ಅರ್ಜಿಯನ್ನು ಇಂದು ಸಿಎಟಿ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎ.ಎಸ್ ಪೊನ್ನಣ್ಣ ವಾದ ಮಂಡಿಸಿ, ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ. ಶರತ್ ಅವರನ್ನು ದುರುದ್ದೇಶದಿಂದ ವರ್ಗಾವಣೆ ಮಾಡಲಾಗಿದೆ. ನಿಯಮಾನುಸಾರ 2 ವರ್ಷಕ್ಕಿಂತ ಮುಂಚೆ ವರ್ಗಾವಣೆ ಮಾಡುವಂತಿಲ್ಲ. ವರ್ಗಾವಣೆಗೆ ಮುನ್ನಾ ಸಲಹಾ ಸಮಿತಿ ಜೊತೆ ಚರ್ಚಿಸಿಲ್ಲ. ಹೀಗಾಗಿ ಶರತ್ ಅವರ ಅವಧಿಪೂರ್ವ ವರ್ಗಾವಣೆ ನಿಯಮ ಬಾಹಿರ ಎಂದು ಆರೋಪಿಸಿದರು.
ಇನ್ನು ಸರ್ಕಾರದ ಪರ ವಾದ ಮಂಡಿಸಲಿರುವ ವಕೀಲರು ಸ್ವಲ್ಪ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಅಕ್ಟೋಬರ್ 23ಕ್ಕೆ ಮುಂದೂಡಲಾಯಿತು.
ಪ್ರಕರಣದ ಹಿನ್ನೆಲೆ : ಆಗಸ್ಟ್ 28 ರಂದು ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ಐಎಎಸ್ ಅಧಿಕಾರಿ ಬಿ. ಶರತ್ ಅವರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ತಿಂಗಳು ತುಂಬುವ ಮುನ್ನವೇ ಬಿ. ಶರತ್ ಅವರನ್ನು ವರ್ಗಾಯಿಸಿದ್ದ ಸರ್ಕಾರ, ಈ ಹುದ್ದೆಗೆ ರೋಹಿಣಿ ಸಿಂಧೂರಿ ಅವರನ್ನು ನಿಯೋಜಿಸಿ ಆದೇಶಿಸಿತ್ತು.
ಬಿ. ಶರತ್ ಅವರನ್ನು ತಿಂಗಳು ತುಂಬುವ ಮುನ್ನವೇ ವರ್ಗಾವಣೆ ಮಾಡಿದ್ದನ್ನು ಖಂಡಿಸಿ ಮೈಸೂರಿನ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಬಳಿಕ ಅಧಿಕಾರಿ ಬಿ. ಶರತ್ ಅವರು ಸರ್ಕಾರದ ವರ್ಗಾವಣೆ ಪ್ರಶ್ನಿಸಿ ಸಿಎಟಿ ಮೆಟ್ಟಿಲೇರಿದ್ದಾರೆ.