ಬೆಳಗಾವಿ: ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ವೀರಯೋಧರಿಗೆ ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿ ಹಾಗೂ ಟಿಪ್ಪು ಸೇನಾ ಸಮಿತಿ ವತಿಯಿಂದ ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರದ ಚೆನ್ನಮ್ಮ ವೃತ್ತದಲ್ಲಿ ಸೇರಿದ ನೂರಾರ ಕಾರ್ಯಕರ್ತರು, ಮುಸ್ಲಿಂ ಸಮುದಾಯದ ಧರ್ಮಗುರುಗಳು ಚೀನಾ ದಾಳಿಯನ್ನು ಖಂಡಿಸಿ, ವೀರ ಯೋಧರ ಮೇಲೆ ದಾಳಿ ನಡೆಸಿದ ಚೀನಾದ ದುಷ್ಕೃತ್ಯ ಅತ್ಯಂತ ಖಂಡನೀಯವಾಗಿದೆ.
ಹೀಗಾಗಿ ಚೀನಾದ ವಸ್ತುಗಳಿಗೆ ಭಾರತದಲ್ಲಿ ಬಹಿಷ್ಕಾರ ಹಾಕಬೇಕು. ಚೀನಾ ವಸ್ತುಗಳನ್ನು ಬಳಸದಂತೆ ಜಾಗೃತಿ ಮೂಡಿಸಬೇಕು. ಈ ಕುರಿತು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಇನ್ನಾದರೂ ಎಚ್ಚೆತ್ತುಕೊಂಡು ಚೀನಾಕ್ಕೆ ಸೂಕ್ತ ಪ್ರತ್ಯುತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಬಳಿಕ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬ ವರ್ಗದವರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅಲ್ಲಾಹು ಅನುಗ್ರಹಿಸಲಿ. ಮುಂದೆ ಇಂತಹ ದುರ್ಘಟನೆಗಳಿಂದ ರಕ್ಷಿಸಲಿ ಎಂದು ಪ್ರಾರ್ಥಿಸಿದರು.