ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಇತರ ಅಗತ್ಯ ವಸ್ತುಗಳಂತೆ ದಿನಸಿ ಅಂಗಡಿಗಳನ್ನೂ ಬೆಳಿಗ್ಗೆ 10 ಗಂಟೆವರೆಗೆ ಮಾತ್ರ ತೆರೆಯಲು ಅವಕಾಶ ನೀಡಲಾಗುತ್ತಿದ್ದು, ಕೊರೊನಾ ಪರಿಸ್ಥಿತಿ ಅರಿತು ಜನ ಸಹಕಾರ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಮನವಿ ಮಾಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊವಿಡ್ ಸಂಖ್ಯೆ ಹೆಚ್ಚುತ್ತಲೇ ಇದೆ. ಜನ 12 ಗಂಟೆವರೆಗೂ ಓಡಾಡುತ್ತಿದ್ದಾರೆ. ರಾಜ್ಯದಲ್ಲಿ ನೀಡಿರುವ ಆದೇಶ ಏನೇ ಇದ್ದರೂ ಜಿಲ್ಲೆಯಲ್ಲಿನ ಪರಿಸ್ಥಿತಿ ನೋಡಿ ನಾಳೆಯಿಂದ ದಿನಸಿ ಅಂಗಡಿಗಳಿಗೂ ಕೇವಲ 10 ಗಂಟೆವರೆಗೆ ತೆರೆಯಲು ಅವಕಾಶ ನೀಡಲಾಗುತ್ತಿದೆ. ಆದರೆ, ತಳ್ಳುಗಾಡಿ ಮೂಲಕ ಮನೆ ಬಾಗಿಲೆಗೆ ತೆರಳಿ ತರಕಾರಿ ಮಾರುವವರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಇನ್ನು ಜಿಲ್ಲೆಯಲ್ಲಿ ಅನಾವಶ್ಯಕವಾಗಿ ಓಡಾಡುವವರ ಮೇಲೆ ಪೊಲೀಸರು ಹೆಚ್ಚಿನ ನಿಗಾ ಇಡಬೇಕಾದ ಅನಿವಾರ್ಯತೆ ಇದೆ. ಜನ ಕೂಡ ಸಹಕಾರ ನೀಡಬೇಕು. ಕೊವಿಡ್ ಹರಡುವುದನ್ನು ನಿಯಂತ್ರಿಸದೇ ಇದ್ದಲ್ಲಿ ಮುಂದೆ ಕಷ್ಟದ ಸ್ಥಿತಿ ನಿರ್ಮಾಣವಾಗಲಿದೆ. ಜನ ಉತ್ತಮ ಸಹಕಾರ ನೀಡಿ ಒಂದೇ ವಾರದಲ್ಲಿ ನಿಯಂತ್ರಣಕ್ಕೆ ಬಂದಿದ್ದು ಗಮನಕ್ಕೆ ಬಂದಲ್ಲಿ ಈ ಕಟ್ಟುಪಾಡುಗಳನ್ನು ಸಡಿಲಗೊಳಿಸಲಾಗುವುದು ಎಂದು ಹೇಳಿದರು.