ಬೆಂಗಳೂರು: ತಮ್ಮನ್ನು ರಾಜ್ಯಸಭೆಗೆ ಕಳಿಸಿಕೊಡುವುದು ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ತಿಳಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯಸಭೆ ಚುನಾವಣೆ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಸಿ ಎಲ್ ಪಿ ನಾಯಕರು ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಈ ಸಂಬಂಧ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಯಾವುದೇ ಆಯ್ಕೆಯ ವಿಚಾರವಾಗಿ ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ. ಅವರು ಏನು ತೀರ್ಮಾನಿಸುತ್ತಾರೆ ನೋಡೋಣ.
ನಮ್ಮ ಪಕ್ಷದವರು ಎಲ್ಲಾ ನೋಡಿಕೊಳ್ಳುತ್ತಾರೆ. ನಾನು ಈಗ ಪ್ರತಿಕ್ರಿಯೆ ನೀಡುವುದು ಸರಿ ಅಲ್ಲ. ಎಲ್ಲಕ್ಕೂ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ ಎಂದರು.
ವಿಧಾನಸಭೆ ಸದಸ್ಯರಿಂದ ರಾಜ್ಯಸಭೆಗೆ ಆಯ್ಕೆಯಾಗುವ ರಾಜ್ಯದ ಒಟ್ಟು ನಾಲ್ಕು ಸ್ಥಾನಗಳ ತೆರವಾಗಿದ್ದು ಚುನಾವಣಾ ಆಯೋಗ ನಿನ್ನೆಯಷ್ಟೇ ಈ ಸ್ಥಾನಗಳನ್ನು ತುಂಬಲು ಚುನಾವಣೆಯ ದಿನಾಂಕವನ್ನು ಘೋಷಿಸಿದೆ.
ಕಾಂಗ್ರೆಸ್ ಪಕ್ಷ ಒಬ್ಬ ಸದಸ್ಯರನ್ನು ಅನಾಯಾಸವಾಗಿ ರಾಜ್ಯಸಭೆಗೆ ಬಳಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದು ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ ಎಂಬ ಮಾತು ಕೇಳಿಬಂದಿದೆ.