ಕುಷ್ಟಗಿ/ಕೊಪ್ಪಳ: ಕುಷ್ಟಗಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಅ.22ಕ್ಕೆ ನಡೆಯಲಿದ್ದು, ಕಾಂಗ್ರೆಸ್-ಬಿಜೆಪಿ ಪಕ್ಷಗಳು ತಮ್ಮ ತಮ್ಮ ಪಕ್ಷದ ಸದಸ್ಯರಿಗೆ ವಿಪ್ ಜಾರಿ ಮಾಡಲು ಮುಂದಾಗಿವೆ.
ಕುಷ್ಟಗಿ ಪುರಸಭೆಯ 23 ವಾರ್ಡ್ ಗಳಿಗೆ ಕಾಂಗ್ರೆಸ್ ನಿಂದ 12, ಬಿಜೆಪಿಯಿಂದ 8, ಮತ್ತು 2 ಪಕ್ಷೇತರರು, ಓರ್ವ ಸದಸ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ 12 ಜನ ಸದಸ್ಯ ಬಲದಲ್ಲಿ ಮೂರನೇ ವಾರ್ಡ್ ಸದಸ್ಯೆ ಗೀತಾ ಶರಣಪ್ಪ ತುರಕಾಣಿ ಸಂಪರ್ಕ ಕಡಿದುಕೊಂಡಿದ್ದಾರೆ. ಬಿಜೆಪಿಯ 8 ಜನ ಮತ್ತು ಮೂವರು ಪಕ್ಷೇತರರು ಸೇರಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸಮಬಲದ ಪೈಪೋಟಿ ನೀಡಲಿದ್ದಾರೆ ಎನ್ನಲಾಗಿದೆ.
ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ 11 ಸದಸ್ಯರು ಈಗಾಗಲೇ ಅಜ್ಞಾತ ಪ್ರವಾಸಕ್ಕೆ ತೆರಳಿದ್ದಾರೆ. ಚುನಾವಣಾ ದಿನಾಂಕ ನಿಗದಿಯಾಗುತ್ತಿದ್ದಂತೆ ಬಿಜೆಪಿ 8 ಸದಸ್ಯರು ಹಾಗೂ ಮೂವರು ಪಕ್ಷೇತರರು ಸಹ ಅಜ್ಞಾತ ಸ್ಥಳಕ್ಕೆ ತೆರಳುತ್ತಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯೆ ಗೀತಾ ಶರಣಪ್ಪ ತುರಕಾಣಿ ಅವರನ್ನು ಬಿಜೆಪಿ ಹೈಜಾಕ್ ಮಾಡಿರುವುದು ತಿಳಿದುಬಂದಿದೆ. ಹಾಗಾಗಿ ಸದಸ್ಯೆಯ ಈ ನಡೆ ಕಾಂಗ್ರೆಸ್ ಪಕ್ಷಕ್ಕೆ ತಳಮಳ ಉಂಟುಮಾಡಿದೆ.
ಈ ಕುರಿತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಅವರು ಪ್ರತಿಕ್ರಿಯಿಸಿ, ಕಾಂಗ್ರೆಸ್ ಸದಸ್ಯರು ಒಗ್ಗಟ್ಟಾಗಿದ್ದು, ಇನ್ನೋರ್ವ ಸದಸ್ಯೆ ಸಂಪರ್ಕ ಸಾಧಿಸಿ, ಅಧಿಕಾರ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಕ್ಷದ ನಿಯಮದಂತೆ 12 ಸದಸ್ಯರಿಗೂ ವಿಪ್ ಜಾರಿ ಮಾಡುವುದಾಗಿ ತಿಳಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ್ ಹಳ್ಳೂರು ಅವರು ಪ್ರತಿಕ್ರಿಯಿಸಿ, ಬಿಜೆಪಿ ಈ ಬಾರಿ ಆಡಳಿತದ ಚುಕ್ಕಾಣಿ ಹಿಡಿಯಲಿದ್ದು, ನಮ್ಮ ಸದಸ್ಯರಿಗೂ ವಿಪ್ ಜಾರಿ ಮಾಡುತ್ತಿದ್ದೇವೆ. ನಮ್ಮ ಪಕ್ಷದ ಸದಸ್ಯರೆಲ್ಲರೂ ಪಕ್ಷಕ್ಕೆ ನಿಷ್ಠರಾಗಿದ್ದು, ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಯುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.