ಶಿವಮೊಗ್ಗ: ನಿನ್ನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾಗರ ತಾಲೂಕಿನ ಅರಳಗೋಡಿನ ಹಾಲುತೋಟದ ನಿವಾಸಿ ಕೋಮರಾಜ್ ಜೈನ್ ಎಂಬುವರು ಕೆಎಫ್ಡಿ(ಕ್ಯಾಸನೂರ್ ಫಾರೆಸ್ಟ್ ಡಿಸೀಸ್)ಯಿಂದ ಮೃತಪಟ್ಟಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಇಂದು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ನಿನ್ನೆ ಮೃತರಾದ ಕೋಮರಾಜ್ ಜೈನ್ ಅವರಿಗೆ ಹೊಟ್ಟೆ ನೋವಿತ್ತು. ಅವರಿಗೆ ಮಣಿಪಾಲದಲ್ಲಿ ಆಪರೇಷನ್ ಆಗಿತ್ತು. ಅವರು ಕೆಎಫ್ಡಿಯಿಂದ ಮೃತ ಪಟ್ಟಿಲ್ಲ. ಅಲ್ಲದೆ ಮಣಿಪಾಲದಲ್ಲಿ ಕೆಎಫ್ಡಿಯಿಂದ ಬಾಧಿತರಾಗಿ ಚಿಕಿತ್ಸೆಯನ್ನು ತಮ್ಮ ಹಣದಲ್ಲಿ ಪಡೆದುಕೊಂಡು ಬಂದವರಿಗೆ ಸರ್ಕಾರ ಹಣ ಭರಿಸುವ ಕುರಿತು ಚರ್ಚೆ ನಡೆಸಲಾಗುವುದು ಎಂದು ಈಶ್ವರಪ್ಪ ತಿಳಿಸಿದ್ದಾರೆ.
ಕೊಮರಾಜ್ ಜೈನ್ಗೆ ಕೆಎಫ್ಡಿ ಪಾಸಿಟಿವ್ ಇತ್ತು, ಆದರೆ ಅವರ ಸಾವಿಗೆ ಕೆಎಫ್ಡಿ ಕಾರಣವಲ್ಲ:
ಈ ಬಗ್ಗೆ ಮೃತ ಕೆಎಫ್ಡಿ ನಿರ್ದೇಶಕರಾದ ಡಾ.ಕಿರಣ್ ಕುಮಾರ್ ಮಾತನಾಡಿ, ಕೋಮರಾಜ್ ಜೈನ್ಗೆ ಕೆಎಫ್ಡಿ ಪಾಸಿಟಿವ್ ಇತ್ತು. ಆದರೆ ಅವರ ಸಾವಿಗೆ ಕೆಎಫ್ಡಿ ಕಾರಣವಲ್ಲ. ಮಾರ್ಚ್ 5ರಂದು ಹೊಟ್ಟೆನೋವಿನಿಂದ ಸಾಗರದ ಆಸ್ಪತ್ರೆಗೆ ಬಂದಾಗ ಅವರನ್ನು ಸ್ಕ್ಯಾನ್ ಮಾಡಿ ನೋಡಿದಾಗ ಅವರ ಕರುಳಿನಲ್ಲಿ ತೂತು ಆಗಿರುವುದು ಕಂಡುಬಂದಿತ್ತು. ಈ ಸಂಬಂಧ ಮಣಿಪಾಲ್ನಲ್ಲಿ ಕರುಳು ತೂತಿಗೆ ಸಂಬಂಧಿಸಿದಂತೆ ಆಪರೇಷನ್ ಸಹ ಮಾಡಲಾಗಿತ್ತು. ಅದೊಂದು ಅತ್ಯಂತ ಅಪಾಯಕಾರಿ ಆಪರೇಷನ್ ಆಗಿತ್ತು. ತೂತಾಗಿರುವ ಕರುಳನ್ನು ಕಟ್ ಮಾಡಿ ಮತ್ತೆ ಎರಡು ಕರುಳನ್ನು ಸೇರಿಸಿ, ಆಪರೇಷನ್ ಮಾಡಲಾಗಿತ್ತು. ಈ ಆಪರೇಷನ್ ಆದ ನಂತರ ಅವರಿಗೆ ಅಲ್ಲಿಯೇ ಒಮ್ಮೆ ಹೃದಯಾಘಾತವಾಗಿತ್ತು ಎಂದರು.
ಅಲ್ಲದೆ ಅಲ್ಲಿ ಅವರ ಪರಿಸ್ಥಿತಿ ಗಂಭೀರವಾದ ನಂತರ ಅವರನ್ನು ಮನೆಗೆ ಕರೆದುಕೊಂಡು ಹೋಗುವುದಾಗಿ ಸಂಬಂಧಿಕರು ತಿಳಿಸಿದ್ದರು ಸಹ ನಾವೇ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದೆವು. ಆದರೆ ಕೋಮರಾಜ್ ಸಾವಿಗೆ ಕೆಎಫ್ಡಿ ಕಾರಣವಲ್ಲ ಎಂದು ಡಾ.ಕಿರಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನೆ:
ಈ ಮಧ್ಯೆ ಅರಳಗೋಡು ಗ್ರಾಮದಲ್ಲಿ ನಿನ್ನೆ ಮೃತರಾದ ಕೋಮರಾಜ್ ಶವವನ್ನಿಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಗ್ರಾಮಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಭೇಟಿ ನೀಡಿದ್ದಾರೆ. ಅರಳಗೋಡಿನಲ್ಲಿ ಮತ್ತೆ ಕೆಎಫ್ಡಿ ಭಯ ಆವರಿಸಿದೆ. ಮಣಿಪಾಲಕ್ಕೆ ಚಿಕಿತ್ಸೆಗೆ ಹೋದವರಿಗೆ ಸರ್ಕಾರವೇ ಹಣ ಭರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಮಕ್ಕೆ ಶಾಸಕ ಹರತಾಳು ಹಾಲಪ್ಪ ಭೇಟಿ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.