ಬೆಂಗಳೂರು: ಬಿಬಿಎಂಪಿ ವಿಧೇಯಕ ಸಂಬಂಧ ವಿಧಾನಸೌಧದಲ್ಲಿ ಶಾಸಕ ಎಸ್. ರಘು ಅಧ್ಯಕ್ಷತೆಯಲ್ಲಿ ಮಹತ್ವದ ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿ ಸಭೆ ನಡೆಯುತ್ತಿದೆ.
ಬಿಬಿಎಂಪಿ ವಲಯ, ವಾರ್ಡ್ ಗಳ ಸಂಖ್ಯೆ ಹೆಚ್ಚಳದ ಕುರಿತು ಪ್ರಸ್ತಾವನೆ ಬಗ್ಗೆ ಸಮಿತಿಯಲ್ಲಿ ಚರ್ಚೆ ನಡೆಯುತ್ತಿದೆ. ಪ್ರಸ್ತುತ ಇರುವ 198 ವಾರ್ಡ್ ಗಳನ್ನು 225 ಕ್ಕೆ ಹೆಚ್ಚಿಸಲು ಸಂಪುಟ ಸಭೆಯಲ್ಲಿ ನಿನ್ನೆ ತೀರ್ಮಾನಿಸಲಾಗಿತ್ತು. ಈ ಬಗ್ಗೆ ಶುಕ್ರವಾರದ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಮಾಧಸ್ವಾಮಿ ಗುರುವಾರ ತಿಳಿಸಿದ್ದರು.
ಜಂಟಿ ಪರಿಶೀಲನಾ ಸಮಿತಿ ಸಭೆಯಲ್ಲಿ ಬಿಬಿಎಂಪಿ ವಲಯಗಳ ಹೆಚ್ಚಳ, ಮೇಯರ್ ಅಧಿಕಾರಾವಧಿ ಹೆಚ್ಚಳ, ವಾರ್ಡ್ ಗಳ ಸಂಖ್ಯೆ ಹೆಚ್ಚಳ, ವಾರ್ಡ್ ಮರುವಿಂಗಡಣೆ ಸೇರಿದಂತೆ ಬಿಬಿಎಂಪಿ ವಿಧೇಯಕದ ಸಂಬಂಧ ಮಹತ್ವದ ನಿರ್ಣಯವನ್ನು ಕೈಗೊಳ್ಳಲಿದ್ದಾರೆ. ಸಮಿತಿ ಸದಸ್ಯರು ಸಭೆಯಲ್ಲಿ ವಾರ್ಡ್ ಮರುವಿಂಗಡಣೆ ಸಂಬಂಧ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.
ಸಭೆಯಲ್ಲಿ ಸಚಿವ ಸುರೇಶ್ ಕುಮಾರ್, ಶಾಸಕರಾದ ಅರವಿಂದ ಲಿಂಬಾವಳಿ, ದಿನೇಶ್ ಗುಂಡೂರಾವ್, ಎಸ್.ಆರ್. ವಿಶ್ವನಾಥ್, ಸತೀಶ್ ರೆಡ್ಡಿ, ಕೃಷ್ಣ ಭೈರೇಗೌಡ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.