ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೈಬರ್ ಕಳ್ಳರ ಹಾವಳಿ ಹೆಚ್ಚುತ್ತಿದೆ. ಇತ್ತೀಚೆಗೆ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಅಕೌಂಟ್ ತೆರೆದು, ಪೊಲೀಸರ ಸ್ನೇಹಿತರಿಗೆ ಹಣಕ್ಕೆ ಬೇಡಿಕೆ ಇಡುತ್ತಿದ್ದ ಗ್ಯಾಂಗ್ ಬೆಳಕಿಗೆ ಬಂದಿತ್ತು. ಇದೀಗ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಅಕೌಂಟ್ ತೆರೆದು ವಂಚನೆ ಮಾಡುತ್ತಿದ್ದ ವಿಚಾರ ಬಯಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿ ಪಿ.ಹರಿಶೇಖರನ್, ಪ್ರಕಾಶ್ ರಾಠೋಡ್, ಹುಮಾಯೂನ್ ನಾಗ್ತೆ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಅಕೌಂಟ್ ಕ್ರಿಯೇಟ್ ಮಾಡಿ ಅಧಿಕಾರಿಗಳ ಸ್ನೇಹಿತರಿಗೆ ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮುಖಾಂತರ ಹಣ ಕಳಿಸುವಂತೆ ಸಂದೇಶ ಮಾಡಿದ್ದಾರೆ.
ಈ ಕುರಿತು ಅಧಿಕಾರಿಗಳ ಸ್ನೇಹಿತರು ಮಾಹಿತಿಯನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸ್ ಅಧಿಕಾರಿಗಳು, ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜನಸಾಮಾನ್ಯರಿಗೆ ಮೋಸ ಮಾಡಿ ಹಣ ದೋಚುತ್ತಿದ್ದ ಸೈಬರ್ ಖದೀಮರು, ಸದ್ಯಕ್ಕೆ ಪೊಲೀಸರಿಗೆ ಕೂಡ ಮೋಸ ಮಾಡಲು ಮುಂದಾಗಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಸೈಬರ್ ಖದೀಮರ ಪತ್ತೆಗಾಗಿ ಶೋಧ ಮುಂದುವರೆಸಿದ್ದಾರೆ. ಅಷ್ಟು ಮಾತ್ರವಲ್ಲದೆ ಈ ಹಿಂದೆ ಬಂಧಿತ ಆರೋಪಿಗಳಿಂದ ಕೂಡ ಮಾಹಿತಿ ಪಡೆಯಲಿದ್ದಾರೆ. ಯಾಕಂದ್ರೆ ಒಂದೇ ಗ್ಯಾಂಗ್ನ ಇತರ ಸಹಚರರು ಈ ರೀತಿಯ ಕೃತ್ಯ ಮಾಡುವ ಸಾಧ್ಯತೆ ಇರುತ್ತದೆ.